ಕೊಂಕಣ ಮಾರ್ಗದಲ್ಲಿ 15ರಿಂದ ಅಕ್ಟೋಬರ್‌ 20ರ ವರೆಗೆ ರೈಲು ವೇಗ ಕಡಿತ

KannadaprabhaNewsNetwork |  
Published : Jun 07, 2025, 01:08 AM IST
32 | Kannada Prabha

ಸಾರಾಂಶ

ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಕೊಂಕಣ ರೈಲ್ವೇಯು ಮಳೆಗಾಲ ವೇಳೆ ತನ್ನ ಮಾರ್ಗದಲ್ಲಿ ಓಡುವ ರೈಲುಗಳ ವೇಗವನ್ನು ಗಂಟೆಗೆ 100 ಕಿ.ಮೀ. ಸರಾಸರಿ ವೇಗದಿಂದ ಗಂಟೆಗೆ 40 ಕಿ.ಮೀ. ತನಕ ಕಡಿಮೆ ಮಾಡುವಂತೆ ಲೋಕೋ ಪೈಲಟ್‌ಗಳಿಗೆ ಸೂಚನೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಕೊಂಕಣ ರೈಲ್ವೇಯು ಮಳೆಗಾಲ ವೇಳೆ ತನ್ನ ಮಾರ್ಗದಲ್ಲಿ ಓಡುವ ರೈಲುಗಳ ವೇಗವನ್ನು ಗಂಟೆಗೆ 100 ಕಿ.ಮೀ. ಸರಾಸರಿ ವೇಗದಿಂದ ಗಂಟೆಗೆ 40 ಕಿ.ಮೀ. ತನಕ ಕಡಿಮೆ ಮಾಡುವಂತೆ ಲೋಕೋ ಪೈಲಟ್‌ಗಳಿಗೆ ಸೂಚನೆ ನೀಡಿದೆ.

ಮುಂಬಯಿ-ಗೋವಾ ಅಥವಾ ಇತರ ಕೊಂಕಣ ರೈಲು ಮಾರ್ಗಗಳಲ್ಲಿ ಓಡುವ ದೂರದ ರೈಲುಗಳು ಭಾರೀ ಮಳೆ ಸಂದರ್ಭ ಗಂಟೆಗೆ 40 ಕಿ.ಮೀ. ವೇಗದಲ್ಲಿ ಓಡಲಿವೆ. ಜೂ.15ರಿಂದ ಅಕ್ಟೋಬರ್‌ 20 ರ ತನಕ ಈ ವೇಗ ನಿಯಂತ್ರಣ ಸೂಚನೆ ಅನ್ವಯವಾಗಲಿದೆ.ಮಳೆಗಾಲದ ವೇಳೆ ಸುಮಾರು 636 ಸಿಬ್ಬಂದಿಗಳು ಕೊಂಕಣ ರೈಲ್ವೇ ಹಳಿಗಳಲ್ಲಿ ಗಸ್ತು ತಿರುಗಲಿದ್ದಾರೆ. ದುರ್ಬಲ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ದಿನದ 24 ತಾಸು ವಾಚ್‌ಮೆನ್‌ಗಳು ನಿಯೋಜನೆಗೊಳ್ಳಲಿದ್ದಾರೆ.ಕೊಂಕಣ ರೈಲು ಮಾರ್ಗದಲ್ಲಿ ರೈಲುಗಳು ಗಂಟೆಗೆ 100 ಕಿ.ಮೀ. ಅಥವಾ ಅದಕ್ಕೂ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಆದರೆ ಮಾನ್ಸೂನ್‌ ಸಮಯದಲ್ಲಿ ಕೆಲವು ವಿಭಾಗಗಳಲ್ಲಿ ಈ ವೇಗವು 75 ರಿಂದ 90 ಕಿ.ಮೀ. ಗೆ ಕಡಿಮೆಯಾಗುತ್ತದೆ. ಭಾರೀ ಮಳೆಯ ಸಮಯದಲ್ಲಿ ಗೋಚರತೆಯು ತೀವ್ರವಾಗಿ ಕಡಿಮೆಯಾಗುತ್ತದೆ. ಕೊಂಕಣ ರೈಲು ಮಾರ್ಗ ಭೂಕುಸಿತಗಳು ಮತ್ತು ಇತರೆ ಮಳೆ ಪ್ರೇರಿತ ವಿಕೋಪಗಳಿಗೆ ಕಾರಣವಾಗುವಂತಹ ಗುಡ್ಡಗಾಡು ಭೂ ಪ್ರದೇಶದ ಮೂಲಕ ಹಾದು ಹೋಗುವ ಹಿನ್ನೆಲೆಯಲ್ಲಿ ರೈಲುಗಳ ವೇಗವನ್ನು ಮತ್ತಷ್ಟು ಕಡಿಮೆಗೊಳಿಸುವ ನಿರ್ಧಾರ ಕೈಗೊಂಡಿದೆ ಎಂದು ರೈಲ್ವೇ ವಕ್ತಾರರು ತಿಳಿಸಿದ್ದಾರೆ.ತುರ್ತು ಪರಿಸ್ಥಿತಿಗೆ ಸಿದ್ಧತೆ: ತುರ್ತು ಪರಿಸ್ಥಿತಿಯಲ್ಲಿ ತ್ವರಿತ ಸಂವಹನಕ್ಕಾಗಿ ರೈಲ್ವೇ ಲೋಕೋ ಪೈಲಟ್‌ಗಳು, ಸ್ಟೇಷನ್‌ ಮಾಸ್ಟರ್‌ಗಳು ಮತ್ತು ಫೀಲ್ಡ್‌ ಅಧಿಕಾರಿಗಳಿಗೆ ಮೊಬೈಲ್‌ ಫೋನ್‌ಗಳನ್ನು ಒದಗಿಸಿದೆ. ರೈಲು ಸಿಬಂದಿಗೆ ವಾಕಿ-ಟಾಕಿಗಳನ್ನು ಒದಗಿಸಲಾಗಿದೆ. ವೈರ್‌ಲೆಸ್‌ ಸಂವಹನವನ್ನು ಸಕ್ರಿಯಗೊಳಿಸಲು ಪ್ರತಿ ನಿಲ್ದಾಣದಲ್ಲಿ 25 ವ್ಯಾಟ್‌ ವಿಎಚ್‌ಎಫ್‌ನ ಬೇಸ್‌ ಸ್ಟೇಷನ್‌ ಸ್ಥಾಪಿಸಲಾಗಿದೆ. ಸಂಭವನೀಯ ಗುಡ್ಡ ಕುಸಿತದ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿಯ ವೇಳೆ ಸೇವೆಗಳ ತ್ವರಿತ ಚಾಲನೆಗಾಗಿ ಗುಡ್ಡ ಅಗೆಯುವ ಯಂತ್ರಗಳನ್ನು ಸನ್ನದ್ಧ ಇರಿಸಲಾಗಿದೆ.

ಬೇಲಾಪುರ್‌, ರತ್ನಗಿರಿ, ಮಡಗಾಂವ್‌ನಲ್ಲಿ ಮಳೆಗಾಲ ಪೂರ್ಣ 24 ಗಂಟೆ ಕಂಟ್ರೋಲ್‌ ರೂಂ ಕಾರ್ಯಾಚರಿಸಲಿದೆ. ಚಿಪ್ಲೂನ್‌, ರತ್ನಗಿರಿ, ವೆರ್ನಾ, ಮಡಗಾಂವ್‌, ಕಾರವಾರ ಮತ್ತು ಉಡುಪಿಯಲ್ಲಿ ವೈದ್ಯಕೀಯ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ