ಪ್ರಶಿಕ್ಷಾರ್ಥಿಗಳಿಗೆ ಕಾನೂನು ತಿಳುವಳಿಕೆ ಮೂಡಿಸಿದರೆ ದೇಶ ಸುಭಿಕ್ಷಾ : ಸೋಮ
ಜಿಲ್ಲಾ ಕಾರಾಗೃಹದಲ್ಲಿ ಅಪರಾಧ ತಡೆಗಟ್ಟುವಿಕೆಯಲ್ಲಿ ಶಿಕ್ಷಕರ ಪಾತ್ರ ಕುರಿತ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರು ಪ್ರಶಿಕ್ಷಾರ್ಥಿಗೆ ತರಬೇತಿ ನೀಡುವ ಶಾಲೆಗಳಿಗೆ ಸಮರ್ಪಕವಾಗಿ ಕಾನೂನು ತಿಳುವಳಿಕೆ ವಿಚಾರಗಳನ್ನು ಮುಟ್ಟಿಸುವ ಕಾರ್ಯಕ್ಕೆ ಮುಂದಾದರೆ ದೇಶ ಸುಭೀಕ್ಷವಾಗಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮ ಅವರು ಹೇಳಿದರು. ಜಿಲ್ಲಾ ಕಾರಾಗೃಹದಲ್ಲಿ ಎಂಎಲ್ಎಂಎನ್ ಬಿಡ್ ಕಾಲೇಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಪರಾಧ ತಡೆಗಟ್ಟುವಿಕೆಯಲ್ಲಿ ಶಿಕ್ಷಕರ ಪಾತ್ರ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ವೃತ್ತಿಯಲ್ಲಿರುವವರು ಮಕ್ಕಳನ್ನು ಅಪರಾಧವೆಸಗದಂತೆ ಬಾಲ್ಯ ದಿಂದಲೇ ಸನ್ನಡತೆಯತ್ತ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಹೊಂದಿರುತ್ತಾರೆ. ಆ ನಿಟ್ಟಿನಲ್ಲಿ ಪ್ರಶಿಕ್ಷಾರ್ಥಿಗಳಿಗೆ ತರಬೇತಿ ಸಮಯದಲ್ಲಿ ಹೆಚ್ಚು ಕಾನೂನು ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳಿಗೆ ಶಾಲಾ ಆಡಳಿತ ಮಂಡಳಿ ಮುಂದಾದರೆ ಉತ್ತಮ ಶಿಕ್ಷಕರನ್ನು ನೀಡಲು ಸಾಧ್ಯ ಎಂದರು. ಇತ್ತೀಚೆಗೆ ಶಾಲಾ, ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಮರೆಯಾಗುತ್ತಿದೆ. ಇದನ್ನು ಸರಿದೂಗಿಸುವ ಕೆಲಸದಲ್ಲಿ ಶಿಕ್ಷಕರು ಮುಂದಾಗಬೇಕು. ಶಾಲೆಗಳು ಭವಿಷ್ಯದ ಭದ್ರಬುನಾದಿ ಸ್ಥಾಪಿಸುವ ಕಾರ್ಖಾನೆಯಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಕರನ್ನು ಸೃಷ್ಟಿಸುವ ಸಂಸ್ಥೆಗಳು ಅತ್ಯಂತ ಸೂಕ್ಷ್ಮತೆಯಿಂದ ಕೂಡಿರಬೇಕು. ಗುಣಮಟ್ಟದ ಶಿಕ್ಷಣ ಒದಗಿಸಿಕೊಡಬೇಕು ಎಂದು ಹೇಳಿದರು. ಶಿಕ್ಷಕರು ಕೇವಲ ಕಾಯಕಕ್ಕೆ ಸೀಮಿತರಾಗದೇ ಸಮಾಜದಲ್ಲಿ ಉತ್ತಮ ಮಕ್ಕಳನ್ನು ರೂಪಿಸುವ ಶಕ್ತಿ ಹೊಂದಿರಬೇಕು. ಪ್ರಸ್ತುತ ಬಿಎಡ್ ಕಾಲೇಜಿನಿಂದ ಬಂದಿರುವ ಪ್ರಶಿಕ್ಷಾರ್ಥಿಗಳು ಭವಿಷ್ಯದಲ್ಲಿ ಶಿಕ್ಷಕರಾಗಲಿದ್ದು ಕಾರಾಗೃಹದಲ್ಲಿ ಬಂಧಿ ಗಳಾಗಿರುವವರ ಸರಿ, ತಪ್ಪುಗಳನ್ನು ಅರಿಯುವ ಸಲುವಾಗಿ ಕರೆತರಲಾಗಿದ್ದು ಇದನ್ನು ಮನಗಂಡು ಸಮಾಜಕ್ಕೆ ಪೂರಕವಾಗಿ ಮುನ್ನಡೆಯಬೇಕು ಎಂದರು. ಮಲೆನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ರೋಗಿಗಳಿಗೆ ಕಾಯಿಲೆ ಬರುವ ಮುನ್ನವೇ ಚಿಕಿತ್ಸೆ ಒದಗಿಸುವ ಮಾದರಿಯಲ್ಲೇ ಶಿಕ್ಷಕರು ಸಮಾಜಕ್ಕೆ ಅಪರಾಧವೆಸಗುವ ಮೊದಲೇ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಿದರೆ ಯಾರೋಬ್ಬರು ಕೂಡಾ ಅಪರಾಧ ನಂಟನ್ನು ಹೊಂದದೇ ಸತ್ಪ್ರಜೆಗಳಾಗಲು ಸಾಧ್ಯ ಎಂದು ತಿಳಿಸಿದರು. ಸಮಾಜದಲ್ಲಿ ಅಪರಾಧ ಎಂಬುದು ನಾನಾಕಾರಣಗಳಿಂದಾಗಲಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಮಕ್ಕಳಿಗೆ ಸರಿ ದಾರಿ ತೋರುವ ಮುಖಾಂತರ ಉತ್ತಮ ನಡತೆಯತ್ತ ಮುನ್ನಡೆಸಲು ಪ್ರೇರೇಪಿಸಬೇಕು ಎಂದರು. ಕಾರಾಗೃಹ ಬಂಧಿಗಳಲ್ಲಿ ಯಾವುದೇ ಕೀಳರಿಮೆ ಹೊಂದಬಾರದು. ಸ್ವಾತಂತ್ರ್ಯ ಪೂರ್ವದಿಂದಲೇ ಅನೇಕ ಹೋರಾಟ ಗಾರರು, ರಾಜಕೀಯ ಮುಖಂಡರು ಸೆರೆವಾಸ ಅನುಭವಿಯೇ ಬಳಿಕ ದೊಡ್ಡವ್ಯಕ್ತಿಗಳಾಗಿ ರೂಪುಗೊಂಡವರು. ಆ ನಿಟ್ಟಿನಲ್ಲಿ ಅಪರಾಧ ಆರೋಪ ಹೊತ್ತಿರುವ ಬಂಧಿಗಳು ಬಿಡುಗಡೆ ಬಳಿಕ ಸಾತ್ವಿಕ ಜೀವನ ನಡೆಸಿ ಸಮಾಜಕ್ಕೆ ಮಾದರಿ ಯಾಗಬೇಕು ಎಂದು ಸಲಹೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ, ಅಪರಾಧ ತಡೆಗಟ್ಟು ವಿಕೆಯಲ್ಲಿ ಶಿಕ್ಷಕರ ಪಾತ್ರ ಕುರಿತು ಕಾರ್ಯಕ್ರಮ ಆಯೋಜಿಸಿದೆ. ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ವಾಸ್ತವತೆ ಅತ್ಯಂತ ಅವಶ್ಯಕ. ಕೇವಲ ಕಲ್ಪನಾ ಲೋಕದಲ್ಲಿದ್ದು ವಾಸ್ತವ ಮರೆತರೆ ಯಾವುದೇ ಕಾರಣಕ್ಕೂ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು. ಕಾರಾಗೃಹಕ್ಕೆ ಆಗಮಿಸಿರುವ ಬಿಎಡ್ ಕಾಲೇಜಿನ ಪ್ರಶಿಕ್ಷಾರ್ಥಿಗಳು ಕಾರಾಗೃಹದ ಪರಿಕಲ್ಪನೆ ಹೊಂದಿರಲು ಸಾಧ್ಯವಿಲ್ಲ. ಸಿನಿಮಾ ಅಥವಾ ಇತರರ ಮಾತುಗಳನ್ನು ನಂಬಿಕೊಂಡು ಸಮಾಜ ಬದಲಾವಣೆ ಅಸಾಧ್ಯ. ಇಂದಿಗೂ ಕಾರಾಗೃಹ ದಲ್ಲಿರುವ ಬಂಧಿಗಳು ಅಪರಾಧಿಗಳಲ್ಲ. ಆರೋಪಗಳನ್ನು ಹೊತ್ತು ಕಾರಾಗೃಹ ಬಂಧಿಗಳಾಗಿದ್ದು ನ್ಯಾಯಾಲಯ ತೀರ್ಪಿನ ಬಳಿಕ ಅಪರಾಧಿಗಳಾಗುತ್ತಾರೆ ಎಂದು ತಿಳಿಸಿದರು. ಇದೇ ವೇಳೆ ಎಂಎಲ್ಎಂಎನ್ ಬಿಎಡ್ ಕಾಲೇಜಿನ ಸುಮಾರು 88 ಪ್ರಶಿಕ್ಷಾರ್ಥಿಗಳು ಕಾರಾಗೃಹ ಭೇಟಿ ನೀಡಿ ಗ್ರಂಥಾಲಯ, ಅಡುಗೆ ಕೋಣೆ, ಕಾರಾಗೃಹ ಬಂಧಿಗಳ ಕೊಠಡಿ ಹಾಗೂ ಗೋಡೆಗಳಲ್ಲಿರುವ ಬರಹಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವಮೂರ್ತಿ, ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ್, ಜೈಲರ್ ಎಂ.ಕೆ.ನೆಲಧರಿ, ವಕೀಲ ನಟರಾಜ್ ಹಾಜರಿದ್ದರು. 6 ಕೆಸಿಕೆಎಂ 3 ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ಏರ್ಪಡಿಸಿದ್ದ ಅಪರಾಧ ತಡೆಗಟ್ಟುವಿಕೆಯಲ್ಲಿ ಶಿಕ್ಷಕರ ಪಾತ್ರ ಕುರಿತ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಸೋಮ ಅವರು ಉದ್ಘಾಟಿಸಿದರು. ಡಾ. ಡಿ.ಎಲ್. ವಿಜಯಕುಮಾರ್, ಕೇಶವಮೂರ್ತಿ, ಎಸ್.ಎಸ್. ಮೇಟಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.