ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರ
ಸಹಕಾರ ಸಂಘಗಳ ಕಾರ್ಯನಿರ್ವಹಣೆಯು ಬದಲಾಗುತ್ತಿರುವ ಕಾಯ್ದೆ, ಕಾನೂನುಗಳಿಗೆ ಅನುಗುಣವಾಗಿ ಇರಬೇಕು. ಇಲ್ಲದಿದ್ದಲ್ಲಿ ವಾಸ್ತವಿಕತೆಗೆ ಹತ್ತಿರವಾಗಿ ವ್ಯವಹರಿಸುವುದು ಕಷ್ಟಸಾಧ್ಯ ಎಂದು ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ ಹೇಳಿದರು.
ಮಂಗಳವಾರ ಟಿಎಂಎಸ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉತ್ತರಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಕುಮಟಾ, ಟಿಎಂಎಸ್, ಟಿಆರ್‌ಸಿ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಹಕಾರ ಸಂಘ, ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ತರಬೇತಿ ಪಡೆದು ಕಾರ್ಯನಿರ್ವಹಿಸುವುದು ಸಹಕಾರ ಸಂಘಗಳ ಪರಿಣಾಮಕಾರಿ ಬೆಳವಣಿಗೆಗೆ ಸಹಾಯಕವಾಗಬಲ್ಲದು. ಇಂತಹ ಬದಲಾವಣೆಗಳನ್ನು ತರಲು ಕಾಲಕಾಲಕ್ಕೆ ನಡೆಯುವ ಮಾಹಿತಿ ಕಾರ್ಯಾಗಾರಗಳಿಂದ ಮಾತ್ರ ಸಾಧ್ಯ ಎಂದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ್ ಶಿರಹಟ್ಟಿ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿದರು.
ಯಶ್ಸಸ್ವಿನಿ ಯೋಜನೆಯ ಜಿಲ್ಲಾ ಸಂಯೋಜಕ ಗಜೇಂದ್ರ ಪಾಲನಕರ ಯಶಸ್ವಿನಿ ಯೋಜನೆಯ ಅನುಷ್ಠಾನ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ ಗಜಾನನ ಹೆಗಡೆ ಹುಳಗೋಳ, ಸಹಕಾರ ಸಂಘಗಳ ಮಾರಾಟಾಧಿಕಾರಿ ಬಿ.ಡಿ. ಡಿಸೋಜಾ, ಟಿಎಂಎಸ್ ಮುಖ್ಯಕಾರ್ಯನಿರ್ವಾಹಕ ವಿನಯ ಹೆಗಡೆ ಮಂಡೆಮನೆ ಉಪಸ್ಥಿತರಿದ್ದರು. ರಶ್ಮಿ ಹೆಗಡೆ ಪ್ರಾರ್ಥಿಸಿದರು. ಟಿಆರ್‌ಸಿಯ ಜಿ.ಜಿ. ಹೆಗಡೆ ಕುರುವಣಿಗೆ ಸ್ವಾಗತಿಸಿದರು. ಟಿಆರ್‌ಸಿ ಮುಖ್ಯ ಕಾರ್ಯನಿರ್ವಾಹಕ ಕಿರಣ ಭಟ್ ಮಾವಿನಕೊಪ್ಪ ಹಾಗೂ ತಟ್ಟೀಸರ ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಜಿ.ವಿ. ಭಟ್ ಅತಿಥಿಗಳಿಗೆ ಪುಸ್ತಕ ನೀಡಿ ಗೌರವಿಸಿದರು. ಕುಮಟಾ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲ ನಾಯಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಕ್ಕು ಹೆಚ್ಚು ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರು ಪಾಲ್ಗೊಂಡು ತರಬೇತಿ ಪ್ರಯೋಜನ ಪಡೆದರು.