ಗದಗ: ತಾಲೂಕಿನ ಹುಲಕೋಟಿ ಗ್ರಾಮದ ಕೆವಿಕೆ ಸಭಾಂಗಣದಲ್ಲಿ ಜಿಪಂ, ತೋಟಗಾರಿಕೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಐ.ಸಿ.ಎ.ಆರ್.-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಾವು ಬೇಸಾಯದಲ್ಲಿ ಆಧುನಿಕ ತಾಂತ್ರಿಕತೆಗಳ ಕುರಿತು ತರಬೇತಿ ಕಾರ್ಯಕ್ರಮ ಜರುಗಿತು.
ರಾಜ್ಯ ಮಟ್ಟದ ಮಾವು ಅಭಿವೃದ್ಧಿ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎಸ್.ವಿ. ಹಿತ್ತಲಮನಿ ಮಾತನಾಡಿ, ಮಾವು ಬೇಸಾಯದ ಕುರಿತು ವೈಜ್ಞಾನಿಕ ತಾಂತ್ರಿಕತೆಗಳು, ಸಲಹೆಗಳು ಹಾಗೂ ಮಾವಿನ ತೋಟಗಳ ನಿರ್ವಹಣೆ ಹಾಗೂ ಮಾವಿನ ಗಿಡಗಳ ಸವರುವಿಕೆಯ ಕುರಿತು ಮಾಹಿತಿ ನೀಡಿದರು.
ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಅವರು, ಗದಗ ಜಿಲ್ಲೆಯಲ್ಲಿನ ಮಾವಿನ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.ಮುಖ್ಯಸ್ಥೆ ಡಾ. ಸುಧಾ ಮಂಕಣಿ ಮಾತನಾಡಿ, ಈ ತರಬೇತಿ ಗದಗ ಜಿಲ್ಲೆಯ ರೈತರಿಗೆ ಬಹಳ ಅನುಕೂಲವಾಗಿದೆ. ರೈತರಿಗೆ ಹೊಸ ಹೊಸ ತಾಂತ್ರಿಕತೆಗಳು ಉಪಯುಕ್ತವಾಗಿವೆ. ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಮಾವಿನ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯೋಣ ಎಂದು ತಿಳಿಸಿದರು.
ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಆರ್. ಓದುಗೌಡರ, ಸುರೇಶ ಕುಂಬಾರ, ಡಾ. ರಫಿ, ಶೈಲೇಂದ್ರ, ಪ್ರಗತಿಪರ ರೈತರಾದ ವಿ.ಜಿ. ಹಿರೇಗೌಡರ, ದೇವೇಂದ್ರಪ್ಪ ಗೊಣೆಪ್ಪನವರ ಇತರರು ಇದ್ದರು. ತಾಂತ್ರಿಕ ಅಧಿವೇಶನದ ಆನಂತರ ಪ್ರಾಯೋಗಿಕವಾಗಿ ಗಿಡಗಳ ಸವರುವಿಕೆ, ಗಿಡಗಳ ಕಾಂಡಕ್ಕೆ ಸಂರಕ್ಷಣಾ ಲೇಪನ ಮಾಡುವುದು ಹಾಗೂ ಮಾವಿನ ಬೆಳೆಯಲ್ಲಿ ಸುಣ್ಣದ ಬಳಕೆ ಮತ್ತು ಹಾಕುವ ಪದ್ಧತಿಯ ಕುರಿತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಎನ್.ಎಚ್. ಭಂಡಿ ಸ್ವಾಗತಿಸಿದರು. ಹೇಮಾವತಿ ಹಿರೇಗೌಡರ ಕಾರ್ಯಕ್ರಮ ನಿರೂಪಿಸಿದರು. ಡಾ. ವಿನಾಯಕ ನಿರಂಜನ ವಂದಿಸಿದರು.