ಮೈಸೂರು ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತದ ಬೆಳೆಯು ಪ್ರಮುಖ ಬೆಳೆಯಾಗಿದ್ದು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವತಿಯಿಂದ ಭತ್ತ ಹಾಗೂ ರಾಗಿ ಉತ್ಪಾದನೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು 90 ರಿಂದ 180 ದಿನಗಳವರೆಗೆ ದಾಸ್ತಾನು ಸೌಲಭ್ಯವನ್ನು ಒದಗಿಸಲಾಗುವುದು.
ಕನ್ನಡಪ್ರಭ ವಾರ್ತೆ ಸುತ್ತೂರು
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ಕೃಷಿ ಭೂಮಿ ಉಳಿಸಿ ಅಭಿಯಾನದ ಅಂಗವಾಗಿ ಭತ್ತ ಹಾಗೂ ರಾಗಿ ಬೆಳೆ ಉತ್ಪಾದನೆಯಲ್ಲಿ ತಾಂತ್ರಿಕಗತೆಗಳ ಕುರಿತ ತರಬೇತಿಯನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವಿಭಾಗೀಯ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಡಿ.ಎನ್. ಮಮತಾ ಉದ್ಘಾಟಿಸಿದರು.
ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತದ ಬೆಳೆಯು ಪ್ರಮುಖ ಬೆಳೆಯಾಗಿದ್ದು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವತಿಯಿಂದ ಭತ್ತ ಹಾಗೂ ರಾಗಿ ಉತ್ಪಾದನೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು 90 ರಿಂದ 180 ದಿನಗಳವರೆಗೆ ದಾಸ್ತಾನು ಸೌಲಭ್ಯವನ್ನು ಒದಗಿಸಲಾಗುವುದು. ಸದರಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕಾದರೆ ಸಮೀಪದ ಎಪಿಎಂಸಿ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಹೆಸರನ್ನು ನೊಂದಾಯಿಸಿಕೊಂಡು ದಾಖಲೆಗಳನ್ನು ಸಲ್ಲಿಸಿ, ಬೆಳೆ ಸಮೀಕ್ಷೆಯನ್ನು ಮಾಡಿಸಬೇಕಾಗುತ್ತದೆ ಎಂದರು.
ಇದರ ಜೊತೆಗೆ ರೈತರಿಗೆ ಜಮೀನಿನಲ್ಲಿ ಕೆಲಸ ನಿರ್ವಹಿಸುವಾಗ ಮರಣ ಹೊಂದಿದರೆ ಒಂದು ಲಕ್ಷ ರು. ಗಳವರೆಗೆ ಅಥವಾ ಅಂಗವಿಕಲರಾದರೆ ರು. 10 ಸಾವಿರಗಳವರೆಗೆ ವಿಮೆ ಮೊತ್ತವನ್ನು ರೈತರಿಗೆ ನೀಡಲಾಗುವುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೃಷಿ ಮಾರುಕಟ್ಟೆ ಮಂಡಳಿಯನ್ನು ಸಂಪರ್ಕಿಸಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ಮಣ್ಣು ಉಳಿಸಿ ಕೃಷಿ ಉಳಿಸಿ, ರೈತರನ್ನು ಉಳಿಸಿ ಎಂಬ ಧೇಯದೊಂದಿಗೆ ಅ. 22 ರಿಂದ ನವೆಂಬರ್ 30ರವರೆಗೆ ಮೈಸೂರು ಜಿಲ್ಲೆಯಾದ್ಯಂತ ಕೃಷಿ ಭೂಮಿ ಉಳಿಸಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಸಾಮಾನ್ಯವಾಗಿ ರೈತರು ಒಂದೇ ತಳಿಯ ಭತ್ತದ ತಳಿಯನ್ನು ಬೆಳೆಯುತ್ತಿದ್ದಾರೆ. ಭತ್ತದಲ್ಲಿ ವಿವಿಧ ದೇಸಿಯ ತಳಿಗಳಿದ್ದು, ಅವುಗಳನ್ನು ಬೆಳೆದರೆ ಉತ್ತಮ ಆದಾಯವನ್ನು ಪಡೆಯಬಹುದು ಎಂದರು.
ಬೇಸಾಯ ವಿಷಯ ತಜ್ಞ ಶಾಮರಾಜ್ ಭತ್ತ ಹಾಗೂ ರಾಗಿ ಬೆಳೆಯಲ್ಲಿ ಉತ್ಪಾದನಾ ತಾಂತ್ರಿಕತೆಗಳಾದ ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರರೋಗ ಹಾಗೂ ಕೀಟ ನಿರ್ವಹಣೆಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ರೈತರು ಹಾಗೂ ಕೆವಿಕೆಯ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.