ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ವತಿಯಿಂದ ಅ.11ರಂದು ಟ್ರಸ್ಟ್‌ನ ಡಾ.ಎಚ್.ಡಿ. ಚೌಡಯ್ಯ ಸಭಾಂಗಣದಲ್ಲಿ ಬುನಾದಿ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಬುನಾದಿ ತರಬೇತಿ ಕಾರ್ಯಾಗಾರವನ್ನು ಮಂಡ್ಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಉದ್ಯೋಗಾಕಾಂಕ್ಷಿ ಪದವೀಧರರು ಹಾಗೂ ಹಾಲಿ ಪದವಿ, ಸ್ನಾತಕೋತ್ತರ ಪದವಿ, ಬಿಎಡ್, ಬಿಇ, ಎಂಬಿಬಿಎಸ್ ಮುಂತಾದ ಕೋರ್ಸುಗಳಲ್ಲಿ ಓದುತ್ತಿರುವ ವಿದ್ಯಾರ್ಥಿ ವೃಂದದವರಿಗೆ ಉಚಿತ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಇದುವರೆಗೂ ಟ್ರಸ್ಟ್ ವತಿಯಿಂದ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ತರಬೇತಿಯನ್ನು ನೀಡಿದ್ದು, 1500ಕ್ಕೂ ಹೆಚ್ಚು ಮಂದಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ಒಂದು ಹೆಗ್ಗಳಿಕೆಯಾಗಿದೆ ಎಂದರು.ಬ್ಯಾಂಕಿಂಗ್ ಹುದ್ದೆಗಳ ಪರೀಕ್ಷೆಗಳನ್ನು ತೆಗೆದುಕೊಳ್ಳುವುದಕ್ಕೆ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುತ್ತಿಲ್ಲ. ಇದರ ಪರಿಣಾಮ ಉತ್ತರ ಭಾರತದದವರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಂಡು ಬರುತ್ತಿದ್ದಾರೆ. ಈ ಹಿಂಜರಿಕೆ ಮನೋಭಾವವನ್ನು ಯುವ ಸಮೂಹ ಬಿಡಬೇಕು. ಸಾಮಾನ್ಯ ಜ್ಞಾನದ ಜೊತೆಗೆ ಇಂಗ್ಲೀಷ್ ಭಾಷೆ ಸ್ವಲ್ಪ ಗೊತ್ತಿದ್ದರೂ ಬ್ಯಾಂಕಿಂಗ್ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಕಿವಿಮಾತು ಹೇಳಿದರು.
ಬ್ಯಾಂಕಿಂಗ್ ಕ್ಷೇತ್ರ ಆಯ್ಕೆಯಿಂದ ಉದ್ಯೋಗ ಭದ್ರತೆ ದೊರಕುತ್ತದೆ. ಸ್ಥಳೀಯವಾಗಿಯೇ ಉದ್ಯೋಗ ಸಿಗಬೇಕೆಂಬ ಮಹದಾಸೆಯಿಂದ ಹೊರಗೆ ಹೋಗುವುದಕ್ಕೆ ಜಿಲ್ಲೆಯವರು ಹಿಂದೇಟು ಹಾಕುತ್ತಿರುವುದರಿಂದಲೇ ಆ ಕ್ಷೇತ್ರಗಳನ್ನು ಬೇರೆಯವರು ಆವರಿಸಿಕೊಳ್ಳಲು ನಾವೇ ಅವಕಾಶ ಮಾಡಿಕೊಡುತ್ತಿದ್ದೇವೆ. ಪಿಯುಸಿ, ಬಿಎ, ಬಿಎಸ್ಪಿ, ಬಿಕಾಂ ಪದವಿಧರರು ಈಗಲಾದರೂ ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಮುಂದಾಗಬೇಕು ಎಂದು ಹೇಳಿದರು.ನಿವೃತ್ತ ಎಸ್‌ಬಿಐ ಮ್ಯಾನೇಜರ್ ಡಾ. ರಾಮಚಂದ್ರ ಮಾತನಾಡಿ, ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಇಂಗ್ಲೀಷ್, ಹಿಂದಿ ಭಾಷೆ ಜೊತೆಗೆ ಕಂಪ್ಯೂಟರ್ ಜ್ಞಾನವೂ ಅವಶ್ಯಕವಾಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ವೊಂದರಲ್ಲೇ 1500 ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿ ಆಹ್ವಾನಿಸಲಿದ್ದಾರೆ ಎಂದರು.
ಈ ಬ್ಯಾಂಕಿಗೆ ಸ್ಥಳೀಯರಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಪರೀಕ್ಷೆಯನ್ನೇ ಬರೆಯುವುದಿಲ್ಲ. ಇದರಿಂದ ಈ ಅವಕಾಶಗಳು ಬೇರೆಯವರ ಪಾಲಾಗುತ್ತಿದೆ. ಬ್ಯಾಂಕಿಂಗ್ ಕ್ಷೇತ್ರ ಸೇರುವುದರಿಂದ ಕೆಲಸದ ಭದ್ರತೆಯೊಂದಿಗೆ, ಸಮಾಜ ಸೇವೆ ಮಾಡುವುದಕ್ಕೆ ಪೂರ್ಣ ಅವಕಾಶವಿದೆ ಎಂದು ಹೇಳಿದರು.ಬ್ಯಾಂಕಿಂಗ್‌ಗೆ ಪ್ರೊಬೇಷನರಿಯಾಗಿ ಸೇರಿದವರಿಗೆ ಆರಂಭದಲ್ಲೇ 90 ಸಾವಿರ ವೇತನ ನೀಡಲಾಗುತ್ತಿದೆ. ಗುಮಾಸ್ತರಿಗೆ 45 ಸಾವಿರ ರೂ.ವರೆಗೆ ಸಂಬಳವಿದೆ. ಇಷ್ಟೊಂದು ವೇತನವಿದ್ದರೂ ಬ್ಯಾಂಕಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹಿಂಜರಿಯುತ್ತಿರುವುದು ನಮ್ಮ ದೌರ್ಬಲ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ಧಿಗೋಷ್ಟಿಯಲ್ಲಿ ಟ್ರಸ್ಟ್ ನಿರ್ದೇಶಕರಾದ ಡಾ. ಮಾದಯ್ಯ, ದೇವರಾಜು, ಡಾ. ಕೆ.ಬಿ. ಬೋರಯ್ಯ, ಡಾ. ರಾಮಲಿಂಗ್ಯ ಇದ್ದರು.