ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪುರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿ ವರ್ಗಾವಣೆಗೊಂಡು ಮತ್ತೆ ಕೆಎಟಿಯಿಂದ ವರ್ಗಾವಣೆ ತಡೆ ತಂದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ, ಸದಸ್ಯರು ಜಿಲ್ಲಾಧಿಕಾರಿ ವಿರುದ್ಧ ಗುರುವಾರ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ ಪ್ರಸಂಗ ನಡೆದಿದೆ.ಪುರಸಭೆ ಅಧ್ಯಕ್ಷ ಕಿರಣ್ ಗೌಡ, ಪುರಸಭೆ ಸದಸ್ಯರಾದ ಗೌಡ್ರ ಮಧು, ಶ್ರೀನಿವಾಸ್ (ಕಣ್ಣಪ್ಪ), ಪಿ.ಶಶಿಧರ್, ರಾಜಗೋಪಾಲ, ಪುರಸಭೆ ಮಾಜಿ ಉಪಾಧ್ಯಕ್ಷ ಕಾರ್ಗಳ್ಳಿ ಸುರೇಶ್, ಮಾಜಿ ಸದಸ್ಯ ಬಸವರಾಜು, ಕಾಂಗ್ರೆಸ್ ಮುಖಂಡ ಮಂಜುನಾಥ್ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಿ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ವಿರುದ್ಧ ಭ್ರಷ್ಟಾಚಾರ ಮತ್ತು ದುರಾಡಳಿತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿ ಅವಧಿಗಿಂತ ಮೊದಲು ವರ್ಗಾವಣೆಯಾಗಿದೆ ಎಂದು ಕೆಎಟಿ ಮೊರೆ ಹೋಗಿದ್ದು ಕೆಎಟಿ ವರ್ಗಾವಣೆಗೆ ತಡೆಯಾಜ್ಞೆ ನೀಡಿದೆ. ಪುರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿ ವರ್ಗಾವಣೆಗೊಂಡ ಸ್ಥಳಕ್ಕೆ ಎಸ್. ಶರವಣ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ವರ್ಗಾವಣೆ ಆದೇಶ ತಡೆ ಹಿಡಿಯಬೇಕು ಎಂದು ಮನವಿಗೆ ಕೆಎಟಿ ಸ್ಪಂದಿಸಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡುವ ಮೂಲಕ ಮತ್ತೆ ಕೆ.ಪಿ.ವಸಂತಕುಮಾರಿ ಇಲ್ಲಿನ ಪುರಸಭೆ ಮುಖ್ಯಾಧಿಕಾರಿಯಾಗಲಿದ್ದಾರೆ.
ಕಾಣದ ಕೈ ಯಾವುದು?ಪುರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿ ವರ್ಗಾವಣೆಗೆ ತಡೆ ತಂದು ಅಧಿಕಾರ ವಹಿಸಿಕೊಳ್ಳಲು ಪುರಸಭೆಗೆ ಬಂದಾಗ ಪುರಸಭೆ ಮುಖ್ಯಾಧಿಕಾರಿ ಕಚೇರಿಗೆ ಬೀಗ ಹಾಕಿತ್ತು. ಕೆಎಟಿಯಿಂದ ವರ್ಗಾವಣೆಗೆ ತಡೆ ತಂದರೂ ಪುರಸಭೆಯ ಸಿಬ್ಬಂದಿ ಪುರಸಭೆ ಮುಖ್ಯಾಧಿಕಾರಿ ಕಚೇರಿ ಬಾಗಿಲು ತೆರೆಯಲಿಲ್ಲ. ಆಗ ಪುರಸಭೆ ಕಚೇರಿ ಕಂಪ್ಯೂಟರ್ ಆಪರೇಟರ್ ಕೊಠಡಿಯಲ್ಲಿ ವರದಿ ಮಾಡಿಕೊಂಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಕಚೇರಿಗೆ ಬೀಗ ಹಾಕಿಸಿ, ಬೀಗ ತೆರೆಯದಂತೆ ಮಾಡಿದ ಕಾಣದ ಕೈ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.