ನಮ್ಮ ತುಳುನಾಡಿನಲ್ಲಿ ಆಟಿ ತಿಂಗಳು ಒಂದು ವಿಶೇಷವಾದ ತಿಂಗಳಾಗಿದೆ. ತುಳುನಾಡಿನ ಹೊರತಾಗಿ ಬೇರೆಡೆ ಈ ತಿಂಗಳನ್ನು ಆಷಾಢ ಮಾಸ ಎಂದು ಕರೆಯುತ್ತಾರೆ. ಕೃಷಿಕರಾದ ತುಳುನಾಡಿನ ಜನರ ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ ಅವರು ಬಹಳ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದರು ಎಂಬುದು ತಿಳಿದುಬರುತ್ತದೆ. ಹವಾಮಾನ ವೈಪರೀತ್ಯದ ಕಾರಣವಾಗಲಿ ಅಥವಾ ಕಷ್ಟದ ಕಾಲವೆಂದಾಗಲಿ, ಈ ತಿಂಗಳಲ್ಲಿ ಮದುವೆ, ಗೃಹಪ್ರವೇಶ, ನಾಮಕರಣ ಮುಂತಾದ ಯಾವುದೇ ಶುಭ ಕಾರ್ಯಗಳನ್ನು ಮಾಡುತ್ತಿರಲಿಲ್ಲ. ಅದು ಇಂದಿಗೂ ಕೆಲವು ಕಡೆಗಳಲ್ಲಿ ನಡೆದುಬರುತ್ತಿದೆ.ಆಟಿ ತಿಂಗಳಲ್ಲಿ ಪ್ರಕೃತಿಯ ವಾತಾವರಣದಲ್ಲಿ ಬದಲಾವಣೆಗಳು ಕಂಡುಬರುತ್ತವೆ. ನಿರಂತರ ಮಳೆ ಮತ್ತು ಬಿಸಿಲಿನ ನಡುವಿನ ಸಂಕ್ರಮಣದ ಕಾಲಘಟ್ಟದಲ್ಲಿ ಭತ್ತದ ಕೃಷಿ ಚಟುವಟಿಕೆಗಳು ನಡೆಯುವುದಿಲ್ಲ. ಗದ್ದೆಯಲ್ಲಿ ಯಾವುದೇ ಬೆಳೆ ಕೊಯ್ಲಿಗೆ ಬರುವುದಿಲ್ಲ.
ಆಟಿ ಅಮಾವಾಸ್ಯೆಯಂದು ಕಷಾಯ ಕುಡಿಯುವ ಸಂಪ್ರದಾಯವೂ ಇದೆ; ಆ ದಿನ ಮುಂಜಾನೆ ಬೇಗ ಎದ್ದು ಹಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಗುದ್ದಿ, ಅದರ ರಸಕ್ಕೆ ಕರಿಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಕಲ್ಲಿನಲ್ಲಿ ನುಣ್ಣಗೆ ರುಬ್ಬುತ್ತಾರೆ. ನಂತರ ಬೊಳ್ಗಲ್ಲು (ಬಿಳಿಕಲ್ಲು) ಬಿಸಿ ಮಾಡಿ ಕಷಾಯಕ್ಕೆ ಹಾಕಿದರೆ ಅದು ಕುದಿಯುತ್ತದೆ. ಹೀಗೆ ತಯಾರಿಸಿದ ಕಷಾಯವನ್ನು ಖಾಲಿ ಹೊಟ್ಟೆಗೆ ಕುಡಿಯುವ ಪದ್ಧತಿ ಇದೆ. ಈ ಕಷಾಯವು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ನಂಬಿಕೆಯಿದೆ. ಇದನ್ನು ಸೇವಿಸುವುದರಿಂದ ಮಲೇರಿಯಾ, ಅತಿಸಾರ, ಚರ್ಮದ ಸಮಸ್ಯೆಗಳು ಹಾಗೂ ಆಸ್ತಮಾ ಮುಂತಾದ ರೋಗಗಳನ್ನು ತಡೆಯಬಹುದು ಎಂದು ಹೇಳಲಾಗುತ್ತದೆ.ಹಾಗೆಯೇ ಆಟಿ ಹದಿನೆಂಟರಂದು ಆಟಿ ಸೊಪ್ಪಿನಿಂದ ಪಾಯಸ ತಯಾರಿಸುತ್ತಿದ್ದರು. ಈ ಆಟಿ ಸೊಪ್ಪನ್ನು ವೈಜ್ಞಾನಿಕವಾಗಿ ಜಸ್ಟಿಸಿಯ ವಿನಡೆನ್ಸಿಸ್ ಎಂದು ಕರೆಯುತ್ತಾರೆ. ಮದ್ದಿನ ಸೊಪ್ಪು ಎಂದು ಪ್ರಚಲಿತದಲ್ಲಿದೆ. ಆಟಿ ಸಮಯದಲ್ಲಿ ಈ ಸೊಪ್ಪಿನಲ್ಲಿ ಹೆಚ್ಚಿನ ನೀರಿನಂಶವೂ ಇರುತ್ತದೆ. ಇದರಿಂದ ತಯಾರಿಸಿದ ಪಾಯಸದ ಬಣ್ಣ ಮತ್ತು ರುಚಿ ಉಳಿದ ಪಾಯಸಗಳಿಗಿಂತ ವಿಭಿನ್ನವಾಗಿರುತ್ತದೆ. ಬೇರೆ ದಿನವೂ ತಯಾರಿಸಬಹುದಲ್ಲವೆ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ ಆಟಿ ಹದಿನೆಂಟರಂದು ಈ ಸೊಪ್ಪಿನಲ್ಲಿ ಔಷಧೀಯ ಗುಣಗಳು ಸಮ ಪ್ರಮಾಣದಲ್ಲಿ ಇರುತ್ತವೆ. ಕ್ಯಾನ್ಸರ್ ನಿರೋಧಕ, ಸಕ್ಕರೆ ಕಾಯಿಲೆ ನಿರೋಧಕ, ರಕ್ತದೊತ್ತಡ ನಿಯಂತ್ರಣ, ಚರ್ಮರೋಗ ನಿಯಂತ್ರಣ, ಹೀಗೆ ಹಲವಾರು ಕಾಯಿಲೆಗಳಿಗೆ ಈ ಸೊಪ್ಪು ರಾಮಬಾಣವಿದ್ದಂತೆ ಎಂಬುದು ಜನರ ನಂಬಿಕೆಯಾಗಿತ್ತು. ಸಂಶೋಧನೆಯ ಪ್ರಕಾರ ಈ ಸೊಪ್ಪಿನಲ್ಲಿ ಕೇವಲ ಹದಿನೆಂಟು ತರಹದ ಮದ್ದಿನಂಶ ಮಾತ್ರವಲ್ಲ ಇಪ್ಪತ್ತನಾಲ್ಕು ತರಹದ ಮದ್ದಿನ ಅಂಶಗಳಿವೆ ಎಂದು ಸಾಬೀತಾಗಿದೆ. ಹಾಗೆಯೇ ಆಟಿ ಅಮಾವಾಸ್ಯೆಯಂದು ಕೆಲವು ದೇವಸ್ಥಾನಗಳಲ್ಲಿ ತೀರ್ಥಸ್ನಾನ ನಡೆಯುತ್ತದೆ. ಈ ತೀರ್ಥಸ್ನಾನ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ನೆಮ್ಮದಿ, ಯೋಗ್ಯ ಸಂತಾನ ಪ್ರಾಪ್ತಿ ಹಾಗೂ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ಆಟಿ ಕುಲ್ಲುನೆ: ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಆಟಿ ತಿಂಗಳಲ್ಲಿ ಸೇರಬಾರದು ಎಂಬ ನಿಯಮವಿದೆ. ಆದ್ದರಿಂದ ಅವರು ತಮ್ಮ ತಾಯಿಯ ಮನೆಗೆ ಹೋಗಿ ಬರುವ ಆಟಿ ಕುಲ್ಲುನೆ ಎಂಬ ಆಚರಣೆ ಪ್ರಚಲಿತದಲ್ಲಿದೆ. ಇದು ಬಡತನದ ಕಾರಣವಾಗಲಿ, ಆಹಾರದ ಕೊರತೆಯಿಂದ ಆರೋಗ್ಯಕರ ಶಿಶು ಜನಿಸದಿರಬಹುದೆಂಬ ಭಾವನೆಯಾಗಲಿ ಅಥವಾ ಮುಂದಿನ ಸುಡುಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಬಹುದು ಎಂಬ ಕಾರಣವಾಗಿರಬಹುದು. ಇಂದಿಗೂ ಈ ಕ್ರಮ ಮುಂದುವರಿದಿದೆ.ಆಟಿ ಕಳೆಂಜ: ಆಟಿ ತಿಂಗಳಲ್ಲಿ ಜನರ ಕಷ್ಟಗಳು, ರೋಗರುಜಿನಗಳು ಹಾಗೂ ಊರಿನ ದುಷ್ಟಶಕ್ತಿಗಳನ್ನು ದೂರ ಮಾಡಲು ಶ್ರೀ ಪರಶಿವನು ಕಳೆಂಜನ ರೂಪದಲ್ಲಿ ಭೂಮಿಗೆ ಬರುತ್ತಾನೆ ಎಂಬ ನಂಬಿಕೆಯಿದೆ. ಅಜಲರು ಮತ್ತು ಮಲೆಯರು ಕಳೆಂಜ ವೇಷ ಧರಿಸಿ ಮನೆ ಮನೆಗೆ ಹೋಗಿ ಚೆಂಡೆ ಬಾರಿಸುತ್ತಾ ಕುಣಿಯುತ್ತಾರೆ.ತೆಂಬಲರೆಯ ಬಡಿಯುತ್ತಾ: ಕಳೆಂಜನು ಮನೆಯಂಗಳದಲ್ಲಿ ಪಾಡ್ದನಕ್ಕೆ ಸರಿಯಾಗಿ ತೆಂಬಲರೆಯ ಬಡಿಯುತ್ತಾ, ಎಡಗೈಯಲ್ಲಿ ಪನೆಕೊಡೆಯನ್ನು ತಿರುಗಿಸುತ್ತಾ, ಬಲಗೈಯಲ್ಲಿ ದೊಣ್ಣೆಯನ್ನು ಹಿಡಿದು ಕೆಂಪು ಬಣ್ಣದ ಸಡಿಲ ಅಂಗಿ ಧರಿಸಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ತೆಂಗಿನ ಮರದ ಸಿರಿಯನ್ನು ಸೊಂಟಕ್ಕೆ ಕಟ್ಟಿಕೊಂಡು, ಕಿವಿಗೆ ಸಿರಿಯ ಕರ್ಣಪತ್ರ ಧರಿಸಿ, ತಲೆಗೆ ಕೇಪುಳ ಹೂವಿನ ದಂಡೆ ಹಾಕಿಕೊಂಡು, ಕೆಂಚುಮೀಸೆ, ಕೇಸರಿ ಗಡ್ಡ, ಕೆಂಪು ಕಣ್ಣು ಹಾಗೂ ಉದ್ದ ಹಲ್ಲುಗಳಿರುವ ಮುಖವಾಡವನ್ನು ಧರಿಸಿ ವೃತ್ತಾಕಾರವಾಗಿ ಕುಣಿಯುತ್ತಾನೆ. ಕುಣಿತದ ಅಂತ್ಯದಲ್ಲಿ ಕೂ... ಕೂ... ಎಂದು ಕೂಗುತ್ತಾನೆ.
-ವಿಮಲಾರುಣ ಪಡ್ಡಂಬೈಲು