ಚಿಕ್ಕದೇವರಾಯ ಒಡೆಯರ್ ಸಮಾನಾಂತರ ವೇದಿಕೆ(ಮಂಡ್ಯ)
‘ಸ್ವಂತಿಕೆಯ ನೆವದಲ್ಲಿ ತಮ್ಮತನ ತುರುಕುವ ಪ್ರಯತ್ನವನ್ನು ಅನುವಾದ ಸಾಹಿತ್ಯದಲ್ಲಿ ಲೇಖಕರು ಮಾಡಬಾರದು. ಕನ್ನಡಿಯಲ್ಲಿ ಮುಖ ನೋಡಿಕೊಂಡಷ್ಟು ಸಹಜವಾಗಿ ಅನುವಾದ ಇರಬೇಕು’ ಎಂದು ಲೇಖಕಿ ಮಲರ್‌ವಿಳಿ ಅಭಿಪ್ರಾಯಪಟ್ಟಿದ್ದಾರೆ.ಅಖಿಲ ಭಾರತ 87ನೇ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಅನುವಾದ ಸಾಹಿತ್ಯದ ಬಗ್ಗೆ ಅವರು ಶುಕ್ರವಾರ ವಿಚಾರ ಮಂಡಿಸಿದರು.
‘ನನ್ನ ಮಾತೃಭಾಷೆ ತಮಿಳಾದರೂ ನನ್ನ ಮಾತಿನ ಭಾಷೆ ಕನ್ನಡ. ತನ್ನದಲ್ಲದ ಮನೆಯಲ್ಲೂ ತನ್ನ ಮನೆಯಂತಿರಲು ಸಾಧ್ಯವಾಗುವುದು ಅನುವಾದದಿಂದ. ನಮ್ಮ ನಿತ್ಯ ಬದುಕಿನಲ್ಲೇ ಅನುವಾದದ ಅಂಶಗಳು ಹೇರಳವಾಗಿವೆ. ಅನುವಾದ ಸಾಹಿತ್ಯದ ವಿಚಾರಕ್ಕೆ ಬರುವುದಾದರೆ ತಮಿಳಿನ ಸಂಗಂ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವಾಗ ಅನೇಕ ಸವಾಲುಗಳು ಎದುರಾದವು. ಇದರಿಂದ ಪಾಠವನ್ನೂ ಕಲಿತಿದ್ದೇನೆ. ಅದರಲ್ಲೊಂದು ಅನುವಾದವನ್ನು ಒಬ್ಬ ಲೇಖಕರು ಮಾಡುವುದಕ್ಕಿಂತ ಇಬ್ಬರು ಮಾಡುವುದು ಉತ್ತಮ. ಎರಡೂ ಭಾಷೆಗಳ ಬಗ್ಗೆ ಉತ್ತಮ ಜ್ಞಾನವಿದ್ದಾಗ ಮಾತ್ರ ಅನುವಾದಕ್ಕೆ ನ್ಯಾಯ ಸಿಗುತ್ತದೆ. ಜೊತೆಗೆ ಮೂಲ ಲೇಖಕ ಹೇಳಿರುವ ಆಂತರ್ಯವನ್ನು, ಮಣ್ಣಿನ ಸೊಗಡನ್ನು ಗ್ರಹಿಸುವುದು ಸಾಧ್ಯವಾಗುತ್ತದೆ. ಇಷ್ಟಾಗಿಯೂ ಈ ಅನುವಾದ ಕಾರ್ಯದಲ್ಲಿ ತಮಿಳಿನ ಕೆಲ ಪರಿಭಾಷೆಗಳನ್ನು ಅನುವಾದಿಸುವಾಗ ಸಮಸ್ಯೆ ಎದುರಿಸಿದ್ದೇನೆ. ಅದಕ್ಕೆ ಸರಿಯಾದ ಪದ ಸಿಗದೆ ಹೊಸಪದ ಸೃಷ್ಟಿಸಿದ್ದೇನೆ, ಹಳೆಗನ್ನಡ ಪದ ಸೇರಿಸಿದ್ದೇನೆ’ ಎಂದೂ ಅವರು ಈ ವೇಳೆ ಹೇಳಿದ್ದಾರೆ.‘ಅನುವಾದ ಸಾಹಿತ್ಯದಲ್ಲಿ ಗಾದೆ ಮಾತು ಮತ್ತು ಪ್ರಾಸವನ್ನು ಯಥಾವತ್ ಅನುವಾದ ಮಾಡಲಾಗದು. ಉಳಿದಂತೆ ತಮಿಳಿನಂಥ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಎರಡೂ ಭಾಷೆಗಳ ನಡುವಿನ ಸಾಮ್ಯ ಅನುವಾದಕ್ಕೆ ಸಹಕಾರಿಯಾಗುತ್ತದೆ. ಸಾಹಿತ್ಯಕವಾಗಿ ನೋಡಿದರೆ ತಮಿಳು ಸಾಹಿತ್ಯ ಬಹಳ ಆಳಕ್ಕಿಳಿದಿದ್ದರೆ, ಕನ್ನಡ ಸಾಹಿತ್ಯ ಬಲು ವಿಸ್ತಾರಕ್ಕೆ ಹಬ್ಬಿದೆ’ ಎಂದೂ ಅವರು ಹೇಳಿದ್ದಾರೆ.
ಇದೇ ವೇಳೆ ವಿಮರ್ಶಕ ಡಾ ಶಿವಾನಂದ ವಿರಕ್ತಮಠ, ‘ಸಾಹಿತ್ಯ ವಿಮರ್ಶೆಯ ದಿಕ್ಕು’ ಎಂಬ ವಿಚಾರವಾಗಿ ಮಾತನಾಡುತ್ತ, ‘ಕನ್ನಡ ವಿಮರ್ಶೆ ಹಲವು ಹೊರಳುಗಳಲ್ಲಿ ಮುನ್ನಡೆದಿದೆ. ಒಂದು ಹಂತದ ಬಳಿಕ ಸಾಂಸ್ಕೃತಿಕ ನೆಲೆಯತ್ತ ಹೊರಳಿಕೊಂಡಿದೆ’ ಎಂದು ಅಭಿಪ್ರಾಯಪಟ್ಟರು.ಸಮ್ಮೇಳನದಲ್ಲಿ ಬೃಹತ್ ಪಾರ್ಕಿಂಗ್ ವ್ಯವಸ್ಥೆ
ಮಂಡ್ಯಃಸಮ್ಮೇಳನದ ಸ್ಥಳದಲ್ಲಿ ಈ ಬಾರಿ ವಾಹನಗಳ ನಿಲುಗಡೆಗೆ ದೊಡ್ಡದಾದ ಜಾಗ ಮೀಸಲಿಡಲಾಗಿದೆ. ಸಮ್ಮೇಳನ ಸಮೀಪ ಇಷ್ಟೊಂದು ಪಾರ್ಕಿಂಗ್ ಇದೆ ಅಂತ ಜನರಿಗೆ ಗೊತ್ತಾಗ್ತಾ ಇಲ್ಲ. ಜನ ಹೆದ್ದಾರಿ ಪಕ್ಕವೇ ಪಾರ್ಕಿಂಗ್ ಮಾಡಿ ನಡ್ಕೊಂಡು ಬರ್ತಾ ಇದ್ದಾರೆ, ಈ ಬಗ್ಗೆ ಇನ್ನಷ್ಟು ಫಲಕ ಬೇಕಿತ್ತು. ನಾಗಮಂಗಲ ರಸ್ತೆ ಗುಂಡಿಗಳನ್ನು ಮುಚ್ಚದಿರುವುದು ಕಿರಿಕಿರಿ ಉಂಟು ಮಾಡಿತು ಎಂದು ಆಕ್ಷೇಪಿಸಿದರು.
ಎಲ್ಲ ವ್ಯವಸ್ಥೆ ಚೆನ್ನಾಗಿದೆ. ಧೂಳಿಲ್ಲ, ಪಾರ್ಕಿಂಗ್ ಚೆನ್ನಾಗಿದೆ, ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದಾರೆ, ಕೊರತೆಗಳೇನೂ ಕಾಣುತ್ತಿಲ್ಲ ಎಂದವರು ಹಾಸನದಿಂದ ಬಂದ ನಾಗರಾಜ್, ರಾಘವೇಂದ್ರ ದಿನೇಶ್ ಮತ್ತಿತರರು.ಬೆವರಿಳಿಸಿದ ಬಿಸಿಲುಉತ್ತರ ಕರ್ನಾಟಕ ಹಾಗೂ ಬೆಂಗಳೂರು ಭಾಗಗಳಲ್ಲಿ ಸಾಕಷ್ಟು ಚಳಿ ಮುನ್ಸೂಚನೆ ಇದ್ದರೂ ಶೀತ ಮಾರುತ ಬೀಸುತ್ತಿದ್ದರೂ ಮಂಡ್ಯದ ಹವೆ ಆಹ್ಲಾದಕರವಾಗಿದೆ, ರಾತ್ರಿ ಚಳಿ ಮಿತಿಮೀರಿರಲಿಲ್ಲ. ಬೆಳಗ್ಗಿನ ಬಿಸಿಲಿನ ಪ್ರಖರತೆ ಜಾಸ್ತಿಯೇ ಇದ್ದು, ಓಡಾಡುತ್ತಲೇ ಇರುವವರಿಗೆ ತುಸು ‘ಬೆವರಿಳಿಸಿದ್ದು’ ಸುಳ್ಳಲ್ಲ.