ರಾಮನಗರ: ಬದಲಾವಣೆ ಜಗದ ನಿಯಮ. ಆ ನಿಟ್ಟಿನಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ ಭ್ರಷ್ಟಾಚಾರ ನಿಯಂತ್ರಣದ ಉದ್ದೇಶದಿಂದ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಎಂದು ಬದಲಾಯಿಸಲಾಗಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ತಿಳಿಸಿದರು.
ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಅಗತ್ಯ ಪರಿಷ್ಕರಣೆ ತರುವುದು ಮೊದಲಿನಿಂದಲೂ ಬಂದಿರುವ ಪದ್ಧತಿ. ಅದೇ ರೀತಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನರೇಗಾ ಯೋಜನೆಯಲ್ಲಿದ್ದ ಹತ್ತಾರು ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಜನೋಪಯೋಗಿ ತಿದ್ದುಪಡಿ ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಹೊಸ ಕಲ್ಪನೆಯೊಂದಿಗೆ ಈ ಯೋಜನೆಗೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿ ತಿದ್ದುಪಡಿ ತರಲಾಗಿದೆ. ಭಾರತದಲ್ಲಿ ಉದ್ಯೋಗ ಖಾತ್ರಿ ಬಗ್ಗೆ ಇರುವ ಶಾಸನ ಇದೇ ಪ್ರಥಮ ಬಾರಿಗೆ ತಿದ್ದುಪಡಿಯಾಗಿಲ್ಲ. ಪ್ರಥಮ ಬಾರಿಗೆ ಹೆಸರು ಬದಲಾಗಿಲ್ಲ. ಇವು ಹತ್ತಾರು ಮಜಲುಗಳಲ್ಲಿ ಬದಲಾಗಿದೆ ಎಂದು ತಿಳಿಸಿದರು.
ಯೋಜನೆ ಗ್ರಾಮೀಣರ ಉದ್ಯೋಗದ ಹಕ್ಕನ್ನು ಕಸಿಯುತ್ತಿಲ್ಲ. ಬದಲಾಗಿ ಹತ್ತಾರು ಪ್ರಯೋಜನಗಳನ್ನು ನೀಡಲಾಗಿದೆ.ನರೇಗಾ ಯೋಜನೆ ವಿಕಸಿತ ಭಾರತ್ ಜಿ ರಾಮ್ ಜಿ ಯೋಜನೆಯಾಗಿ ಬದಲಾದ ಬಳಿಕ ಮಾನವ ದಿನಗಳ ಸಂಖ್ಯೆಯನ್ನು 100 ರಿಂದ 125ಕ್ಕೆ ಹೆಚ್ಚಿಸಲಾಗಿದೆ. ಪುರುಷ ಹಾಗೂ ಮಹಿಳೆಯರಿಗೆ ಸಮಾನವಾಗಿ 370 ಕೂಲಿ ನಿಗದಿಪಡಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಯೋಜನೆ ಪರಿಷ್ಕರಿಸಲಾಗಿದೆ. ವಿಜಿ ಜಿ ರಾಮ್ ಜಿ ಕಾಯ್ದೆ ಜಾರಿಯಿಂದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಪೆಟ್ಟುಬಿದ್ದಿಲ್ಲ. ಬದಲಾಗಿ ಗ್ರಾಪಂ ವ್ಯವಸ್ಥೆ ಬಲಗೊಳ್ಳಲಿದೆ. ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಆಡಳಿತಾತ್ಮಕ ವ್ಯವಸ್ಥೆ ಬಲಗೊಳ್ಳಲಿದೆ ಎಂದು ಮಹೇಶ್ ಹೇಳಿದರು.
2011ರ ಬಜೆಟ್‌ನಲ್ಲಿ ಯುಪಿಎ ಸರ್ಕಾರ ನರೇಗಾ ಯೋಜನೆಗೆ 40 ಸಾವಿರ ಕೋಟಿ ಮೀಸಲಿಟ್ಟಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನುದಾನವನ್ನು 2.86 ಲಕ್ಷ ಕೋಟಿಗೆ ಹೆಚ್ಚಿಸಲಾಯಿತು. ರಾಜ್ಯಗಳಿಗೆ ಸರಾಸರಿ 17 ಸಾವಿರ ಕೋಟಿ ಅನುದಾನ ಹೆಚ್ಚಾಯಿತು. 2025ರಲ್ಲಿ ಯೋಜನೆಗೆ 85,334 ಕೋಟಿ ವೆಚ್ಚ ಮಾಡಲಾಗಿದ್ದು 5.78 ಕೋಟಿ ಮಂದಿಗೆ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.ಈ ಹೊಸ ಮಸೂದೆ ಪ್ರಕಾರ ರಾಜ್ಯದ ಪಾಲುದಾರಿಕೆ ಹೆಚ್ಚಿಸಿದೆ. ಇದರಿಂದ ರಾಜ್ಯ ಸರ್ಕಾರಗಳು ಹೆಚ್ಚು ಆರ್ಥಿಕ ಹೊಣೆಗಾರಿಕೆ ಹೊರಬೇಕಾಗಿದೆ. ಯೋಜನೆ ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ಜಾರಿಯಾಗದಿರುವುದನ್ನು ಸಹಿಸದ ಪ್ರತಿಪಕ್ಷಗಳು ಸುಳ್ಳು ವದಂತಿಗಳನ್ನು ಹರಡುತ್ತಿದೆ. ಬಿಜೆಪಿ ವಾಸ್ತವ ಅಂಶಗಳನ್ನು ರೈತರು ಮತ್ತು ಕೂಲಿ ಕಾರ್ಮಿಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಿದೆ ಎಂದು ಎನ್ .ಮಹೇಶ್ ತಿಳಿಸಿದರು.
ಸುದ್ದಿಗೋಷ್ಡಿಯಲ್ಲಿ ರಾಜ್ಯ ಮಾಧ್ಯಮ ವಕ್ತಾರ ಪದ್ಮನಾಭ್, ರುದ್ರದೇವರು, ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ಪ್ರಕಾಶ್, ಕಾರ್ಯದರ್ಶಿ ಭೂಪತಿ, ರಾ-ಚ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು, ಜಿಲ್ಲಾ ಮಾಧ್ಯಮ ಸಂಚಾಲಕ ಚೇತನ್, ಬಿಜೆಪಿ ರಾಜ್ಯ ಪರಿಷತ್ತು ಸದಸ್ಯ ಸುರೇಶ್, ಎಸ್ಸಿ ಮಂಡಲದ ಮಾಜಿ ಅಧ್ಯಕ್ಷ ರಾಜು, ಮುಖಂಡರಾದ ಜಯರಾಂ, ನಾಗೇಶ್, ಕಾಳಪ್ಪ ಇದ್ದರು.13ಕೆಆರ್ ಎಂಎನ್ 8.ಜೆಪಿಜಿ
ರಾಮನಗರದಲ್ಲಿ ಮಾಜಿ ಸಚಿವ ಎನ್.ಮಹೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.