ಸರ್ಕಾರದ ಆಫರ್‌ ಒಪ್ಪದ ಸಾರಿಗೆ ನೌಕರರು

KannadaprabhaNewsNetwork |  
Published : Feb 20, 2026, 02:00 AM IST
KSRTC 2 | Kannada Prabha

ಸಾರಾಂಶ

ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿ ಹಾಗೂ 2025ರ ಏ.1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಾಡಿರುವ ಆದೇಶ ಒಪ್ಪದ ಸಾರಿಗೆ ನೌಕರರು ಗುರುವಾರ ಯಶಸ್ವಿಯಾಗಿ ಬೆಂಗಳೂರು ಚಲೋ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿ ಹಾಗೂ 2025ರ ಏ.1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಾಡಿರುವ ಆದೇಶ ಒಪ್ಪದ ಸಾರಿಗೆ ನೌಕರರು ಗುರುವಾರ ಯಶಸ್ವಿಯಾಗಿ ಬೆಂಗಳೂರು ಚಲೋ ಪ್ರತಿಭಟನೆ ನಡೆಸಿದರು.

ಜತೆಗೆ, ಮಾ. 2ರೊಳಗೆ ಪೂರ್ಣಪ್ರಮಾಣದಲ್ಲಿ ಬೇಡಿಕೆ ಈಡೇರಿಕೆ ಮಾಡದಿದ್ದರೆ ವಿಭಾಗವಾರು ಪ್ರತಿಭಟನೆ ಹಾಗೂ ಮುಷ್ಕರ ನಡೆಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಸಬೇಕು ಹಾಗೂ 2024ರ ಜ.1ರಿಂದ ಅನ್ವಯವಾಗುವಂತೆ ಹೊಸದಾಗಿ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಗುರುವಾರ ಸಾರಿಗೆ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ 26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿ ಹಾಗೂ 2025ರ ಏ. 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡುವುದಾಗಿ ಸರ್ಕಾರ ಮಾಡಿರುವ ಆದೇಶವನ್ನು ಒಪ್ಪುವುದಿಲ್ಲ ಎಂದು ತಿಳಿಸಿದ ಸಾರಿಗೆ ನೌಕರರು, ಮಾ. 2ರೊಳಗೆ ತಮ್ಮ ಬೇಡಿಕೆಯನ್ನು ಪೂರ್ಣಪ್ರಮಾಣದಲ್ಲಿ ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತಂತೆ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರಿಗೂ ತಿಳಿಸಿದ ಪ್ರತಿಭಟನಾ ನಿರತ ನೌಕರರು, ಮಾ. 2ರವರೆಗೆ ತಮ್ಮ ಬೇಡಿಕೆ ಈಡೇರಿಕೆಗೆ ಗಡುವು ನೀಡಿದರು. ಇಲ್ಲದಿದ್ದರೆ ಹೋರಾಟ ಉಗ್ರಗೊಳಿಸುತ್ತಾ ಹೋಗುವುದಾಗಿ ಎಚ್ಚರಿಕೆ ನೀಡಿದರು.

ಸರ್ಕಾರ ಮಾತುಕತೆ ಮಟ್ಟಕ್ಕೆ ಬಂದಿರುವುದರಿಂದ ಬೆಂಗಳೂರು ಚಲೋ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸೋಣ. ಮಾ. 2 ರೊಳಗೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಗಡುವು ನೀಡೋಣ ಹಾಗೂ ಮಾ.2ರಿಂದ ವಿಭಾಗವಾರು ಪ್ರತಿಭಟನೆ ನಡೆಸಿ, ಮುಂದೆ ಮುಷ್ಕರದಂತಹ ಹೋರಾಟಕ್ಕೆ ಇಳಿಯೋಣ ಎಂದು ನಿರ್ಧರಿಸಿದರು.

ಕೊನೆಗೆ ತಮ್ಮ ನಿರ್ಧಾರವನ್ನು ಜಂಟಿ ಕ್ರಿಯಾ ಸಮಿತಿ ಪ್ರಮುಖರು ಪ್ರತಿಭಟನಾ ವೇದಿಕೆಯಿಂದ ಘೋಷಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಬಹುತೇಕ ನೌಕರರು, ಜಂಟಿ ಕ್ರಿಯಾ ಸಮಿತಿ ಪ್ರಮುಖರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಪ್ರತಿ ಬಾರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡುವುದಕ್ಕೆ ಮಾತ್ರ ಹೋರಾಟ ಸೀಮಿತವಾಗುತ್ತಿದೆ. ಇದರಿಂದ ನಮ್ಮ ಹೋರಾಟಕ್ಕೆ ಬೆಲೆ ಇರುವುದಿಲ್ಲ. ಹೀಗಾಗಿ ಸರ್ಕಾರ ಒಪ್ಪಲೇಬೇಕಾದ ಅನಿವಾರ್ಯತೆ ಸೃಷ್ಟಿಸುವಂತಹ ಹೋರಾಟಕ್ಕೆ ಕರೆ ನೀಡಿ ಎಂದು ಆಗ್ರಹಿಸಿದರು. ಅಂತಿಮವಾಗಿ ಜಂಟಿ ಕ್ರಿಯಾ ಸಮಿತಿಯ ಪ್ರಮುಖರು, ಏಕಾಏಕಿ ಕಠಿಣ ಹೋರಾಟಕ್ಕೆ ಮುಂದಾದರೆ 2021ರಲ್ಲಿ ನೌಕರರನ್ನು ವಜಾ ಮಾಡಿದಂತಹ ಪರಿಸ್ಥಿತಿ ಮತ್ತೆ ಮರುಕಳಿಸಲಿದೆ. ಹೀಗಾಗಿ ಸದ್ಯಕ್ಕೆ ಹೊರಾಟ ನಿಲ್ಲಿಸೋಣ ಎಂದು ಸಮಾಧಾನಪಡಿಸಿದರು.

ಗುರುವಾರ ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಪ್ರತಿಭಟನೆಯಲ್ಲಿ ಕೆಎಸ್ಸಾರ್ಟಿಸಿ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರೀಕ್ಷಿಸಿದಷ್ಟು ಸಾರಿಗೆ ನೌಕರರು ಪಾಲ್ಗೊಂಡಿರಲಿಲ್ಲ. ಬುಧವಾರ ಸರ್ಕಾರದ ಮಾಡಿದ್ದ ಆದೇಶದ ಹಿನ್ನೆಲೆಯಲ್ಲಿ ಬಹುತೇಕ ನೌಕರರು ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ಹಿಂದೆ ಸರಿದರೂ ಬಿಎಂಟಿಸಿ ನೌಕರರು ಹೆಚ್ಚಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಉಳಿದಂತೆ ಉಳಿದ ಮೂರು ನಿಗಮಗಳ ನೌಕರರು ಕಡಿಮೆ ಪ್ರಮಾಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದರು.ಎಂಡಿ ಭರವಸೆಗೆ ನೌಕರರ ವಿರೋಧ:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನಿರ್ದೇಶನದಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ಮಧ್ಯಾಹ್ನದ ವೇಳೆಗೆ ಪ್ರತಿಭಟನಾ ಸ್ಥಳಕ್ಕಾಗಮಿಸಿ, ಸರ್ಕಾರ ಮಾಡಿರುವ ಆದೇಶವನ್ನು ವಿವರಿಸಿದರು. ಜತೆಗೆ 2025ರ ಏ.1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಿಸುವ ಕುರಿತು ಸಾರಿಗೆ ಸಂಘಟನೆಗಳ ಪ್ರಮುಖರೊಂದಿಗೆ ಶೀಘ್ರದಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.ಈ ವೇಳೆ ಅಕ್ರಂ ಪಾಷಾ ಅವರ ಹೇಳಿಗೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾನಿರತ ನೌಕರರು, 26 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಜತೆಗೆ 2024ರ ಜ. 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಬೇಕು. ಜೀವನ ನಡೆಸುವುದಕ್ಕೂ ಕಷ್ಟವಾಗಿದೆ ಎಂದು ಭಾವುಕರಾಗಿ ಹೇಳಿದರು.ಅಂತಿಮವಾಗಿ ಮನವಿ ಸ್ವೀಕರಿಸಿದ ಅಕ್ರಂ ಪಾಷಾ, ನೌಕರರ ಬೇಡಿಕೆಯನ್ನು ಸಾರಿಗೆ ಸಚಿವರ ಗಮನಕ್ಕೆ ತರಲಾಗುವುದು. ಶೀಘ್ರ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿದರು.ಮುಖಂಡರ ನಿರ್ಧಾರಕ್ಕೆ ನೌಕರರ ಆಕ್ರೋಶ:ಸಂಜೆ 4 ಗಂಟೆ ನಂತರ ಮುಂದಿನ ನಿರ್ಧಾರದ ಜಂಟಿ ಕ್ರಿಯಾ ಸಮಿತಿ ಪ್ರಮುಖರು ಸಭೆ ನಡೆಸಿದರು. ಸಭೆಯಲ್ಲಿ, ಸರ್ಕಾರ ಹಿಂದೆ 16 ತಿಂಗಳ ವೇತನ ಹೆಚ್ಚಳ ಹಿಂಬಾಕಿ ನೀಡುತ್ತೇವೆ ಎಂದು ತಿಳಿಸಿತ್ತು. ಈಗ ಅದನ್ನು 26 ತಿಂಗಳಿಗೆ ಹೆಚ್ಚಳ ಮಾಡಿದೆ. ಅದರೊಂದಿಗೆ ಹೊಸದಾಗಿ ವೇತನ ಹೆಚ್ಚಳಕ್ಕಾಗಿ ಸಭೆ ನಡೆಸುವುದಾಗಿಯೂ ತಿಳಿಸಿದೆ.-ಬಾಕ್ಸ್‌-ಅನಂತ ಸುಬ್ಬರಾವ್‌ ಹೆಸರು ಪ್ರಸ್ತಾಪಕ್ಕೆ ಆಕ್ರೋಶಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು ಮಾತನಾಡುತ್ತಾ, ಈ ಹಿಂದೆ ಅನಂತ್ ಸುಬ್ಬರಾವ್‌ ಅವರೊಂದಿಗೆ ಮಾತುಕತೆ ಮಾಡಿದ್ದೆವು ಎಂದು ಹೇಳಿದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನೌಕರರು, ನಮ್ಮ ನಾಯಕರು ನಮ್ಮನ್ನು ಅಗಲಿದ್ದಾರೆ. ಅವರ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡಿ ಅವರಿಗೆ ಅಗೌರವ ತೋರಬೇಡಿ ಎಂದು ಹೇಳಿದರು.-ಬಾಕ್ಸ್‌-ನಿಗದಿಗಿಂತ ಹೆಚ್ಚಿನ ಬಸ್‌ ಸೇವೆಸಾರಿಗೆ ನೌಕರರ ಪ್ರತಿಭಟನೆ ನಡೆದರೂ ರಾಜ್ಯದಲ್ಲಿ ಬಸ್‌ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಅಲ್ಲದೆ, ಮಲೆಮಹದೇಶ್ವರ ಬೆಟ್ಟ ಜಾತ್ರೆ ಮತ್ತು ಅವನಿ ಜಾತ್ರೆ ಹಿನ್ನೆಲೆಯಲ್ಲಿ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಹೆಚ್ಚುವರಿ ಬಸ್‌ ಸೇವೆ ನೀಡಲಾಯಿತು. ಇನ್ನು, ಪ್ರತಿಭಟನೆಯಲ್ಲಿ ಹೆಚ್ಚಾಗಿ ಬಿಎಂಟಿಸಿ ನೌಕರರು ಪಾಲ್ಗೊಂಡಿದ್ದರೂ, ಬಸ್‌ ಸೇವೆಯಲ್ಲಿ ವ್ಯತ್ಯಯವಾಗಲಿಲ್ಲ. ನಿಗದಿಯಂತೆ ಗುರುವಾರ 6,296 ಟ್ರಿಪ್‌ಗಳಲ್ಲಿ ಸೇವೆ ನೀಡಬೇಕಾದ ಜಾಗದಲ್ಲಿ 6,302 ಟ್ರಿಪ್‌ ಬಸ್‌ ಸೇವೆ ನೀಡಲಾಗಿದೆ. ಉಳಿದಂತೆ ವಾಹನಗಳು ಕೆಟ್ಟುನಿಂತ ಕಾರಣದಿಂದಾಗಿ 23 ಟ್ರಿಪ್‌ಗಳನ್ನು ಸ್ಥಗಿತಗೊಳಿಸುವಂತಾಯಿತು. ಅದನ್ನು ಹೊರತುಪಡಿಸಿದರೆ ನೌಕರರ ಕೊರತೆಯಿಂದ ಬಸ್‌ ಸೇವೆ ಸ್ಥಗಿತಗೊಳ್ಳಲಿಲ್ಲ.-ಬಾಕ್ಸ್‌-ನೌಕರರ ಸಮಸ್ಯೆಗೆ ಬಿಜೆಪಿ ಸರ್ಕಾರವೇ ಕಾರಣ: ಸಚಿವನೌಕರರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವರ ರಾಮಲಿಂಗಾರೆಡ್ಡಿ, ಈಗಿನ ಪರಿಸ್ಥಿತಿಗೆ ಬಿಜೆಪಿ ಸರ್ಕಾರವೇ ಕಾರಣ. ಬಿಜೆಪಿ ಅಧಿಕಾರದಲ್ಲಿದ್ದಾಗ ವೇತನ ಪರಿಷ್ಕರಣೆ ಮಾಡಿ ಅನುದಾನ ಮೀಸಲಿಟ್ಟಿರಲಿಲ್ಲ. ಅಲ್ಲದೆ, ವೇತನ ಹೆಚ್ಚಳದ ಆದೇಶದಲ್ಲಿ 2023ರಿಂದ ಎಂದು ಉಲ್ಲೇಖಿಸಲಾಗಿತ್ತು. 2020ರಿಂದಲೇ ವೇತನ ಹೆಚ್ಚಳ ಎಂದು ಆದೇಶಿಸಿ, ಅನುದಾನ ಮೀಸಲಿಟ್ಟಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ ಎಂದು ಹೇಳಿದರು.ಬಿಜೆಪಿ ಅಧಿಕಾರದಿಂದ ಕೆಳಗಿಳಿಯುವಾಗ ಸಾರಿಗೆ ನಿಗಮಗಳಿಗೆ 4 ಸಾವಿರ ಕೋಟಿ ರು. ಸಾಲ ಉಳಿಸಲಾಗಿತ್ತು. ಜತೆಗೆ ಯಾವುದೇ ನೇಮಕಾತಿಯನ್ನೂ ಮಾಡಿಕೊಂಡಿರಲಿಲ್ಲ. ಆದರೆ, ನಾನು ಸಾರಿಗೆ ಸಚಿವನಾದ ನಂತರ ಸಾಲ ತೀರಿಸಲು ಕ್ರಮ ಕೈಗೊಂಡಿದ್ದೇನೆ. ಜತೆಗೆ ನೇಮಕಾತಿಗೆ ಮತ್ತು ಹೊಸ ಬಸ್‌ ಖರೀದಿಗೆ ಮರು ಚಾಲನೆ ನೀಡಿದ್ದೇನೆ ಎಂದು ತಿಳಿಸಿದರು.----ಕೋಟ್‌:ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಯುತ್ತಿದ್ದಂತೆ ಸರ್ಕಾರ ಭಾಗಶಃ ಬೇಡಿಕೆ ಈಡೇರಿಸಿದೆ. ಅಲ್ಲದೆ, ನಮ್ಮನ್ನು ಸಭೆಗೆ ಕರೆದು ಮಾತುಕತೆ ಮಾಡುವುದಾಗಿಯೂ ಸಾರಿಗೆ ಸಚಿವರು ತಿಳಿಸಿದ್ದಾರೆ. ಹೀಗಾಗಿ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಮಾ. 2ರೊಳಗೆ ಮಾತುಕತೆಗೆ ಕರೆದು ಬೇಡಿಕೆ ಈಡೇರಿಸದಿದ್ದರೆ ಮುಂದಿನ ಹೋರಾಟ ನಡೆಸಲಾಗುವುದು.

- ವಿಜಯ್‌ ಭಾಸ್ಕರ್‌, ಪ್ರಧಾನ ಕಾರ್ಯದರ್ಶಿ, ಕೆಎಸ್ಸಾರ್ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗಾಯತ, ಗಾಣಿಗಕ್ಕೆ ಕಾನೂನಲ್ಲಿ ಪ್ರತ್ಯೇಕ ಗುರುತಿಲ್ಲ: ಕೋರ್ಟ್‌
ಸರ್ಕಾರಿ ಶಾಲೆಗೆ ಉದ್ಯಮಿಯಿಂದ ಪ್ರೊಜೆಕ್ಟರ್, ಧ್ವನಿವರ್ಧಕ ವಿತರಣೆ