ಶಿಗ್ಗಾಂವಿ: ವಾಕರಸಾ ಸಂಸ್ಥೆಯ ಸಾರಿಗೆ ಬಸ್ ಒಂದರಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ೨೦ ಗ್ರಾಂ ಚಿನ್ನದ ಆಭರಣಗಳನ್ನು ಬಸ್ ಚಾಲಕ ಮತ್ತು ನಿರ್ವಾಹಕರು ಮರಳಿಸಿದ್ದಾರೆ.
ಚೀಲದಲ್ಲಿ ಸಿಕ್ಕ ಬಸ್ ಟಿಕೆಟ್ ಆಧಾರದಲ್ಲಿ ಬಸ್ ಪತ್ತೆ ಹಚ್ಚಲಾಯಿತು. ಶಿಗ್ಗಾಂವಿ ನಿಲ್ದಾಣ ನಿಯಂತ್ರಣಾಧಿಕಾರಿ ರಾಜೇಸಾಬ ಪಿ. ನದಾಫ ಅವರಿಗೆ ಮಹಿಳೆ ಪತ್ತೆಹಚ್ಚುವಲ್ಲಿ ಕಡಲೆ ಮಾರುವ ಹುಡುಗ ಹುಸಮಾನ ಮದ್ರಾಸಿ, ಎಗ್ ರೈಸ್ ಅಂಗಡಿ ಮಾಲೀಕ ಇಬ್ರಾಹಿಮ ಮುಬಾರಕ ಸುಳಿವು ನೀಡಿದರು.
ಬಳಿಕ ಚಿನ್ನಾಭರಣ ಕಳೆದುಕೊಂಡಿದ್ದ ಜಾಕಿಯಾ ಸೌದಾಗಾರ ಎಂಬ ಮಹಿಳೆಯನ್ನು ಹಾವೇರಿ ವಿಭಾಗೀಯ ಕಚೇರಿಗೆ ಕರಸಿ, ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜೆ. ಹಾಗೂ ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಪಾಟೀಲ ಅವರು ಮಹಿಳೆಗೆ ಚೀಲ ಮತ್ತು ಅದರಲ್ಲಿನ್ನ ಚಿನ್ನಾಭರಣಗಳನ್ನು ಮರಳಿಸಿದ್ದಾರೆ.ಚಾಲಕ ವಿಜಯಸಿಂಗ್, ಸಹಕರಿಸಿದ ನಿಲ್ದಾಣಾಧಿಕಾರಿ ರಾಜೇಸಾಬ ಪಿ. ನದಾಫ, ಇಬ್ರಾಹಿಂ ಮುಬಾರಕ, ಹುಸಮಾನ ಮದ್ರಾಸಿ ಅವರನ್ನು ಪಟ್ಟಣದ ನಿವಾಸಿಗಳು ಸನ್ಮಾನಿಸಿದರು. ಲಕ್ಷ್ಮೀಕಾಂತ ಮಿರಜಕರ, ಗೌಸ್ ಅಗಸನಮಟ್ಟಿ, ಅಬ್ದುಲ್ ಮಜೀದ ಸೌದಾಗರ, ಆಸಿಫ್ ಮಾರಂಬಿಡ, ಹಜರತ್ತಲಿ ತೌಕಲ್ಲಿ ಇತರರಿದ್ದರು.