ಸಾರಿಗೆ ಮುಷ್ಕರ: ಸೇವೆಯಲ್ಲಿ ತೊಂದರೆಯಾಗದಂತೆ ಕ್ರಮಕ್ಕೆ ತಹಸೀಲ್ದಾರ್ ಸೂಚನೆ

KannadaprabhaNewsNetwork |  
Published : Aug 05, 2025, 12:30 AM IST
4ಕೆಎಂಎನ್ ಡಿ12 | Kannada Prabha

ಸಾರಾಂಶ

ಡಿಪೋದಲ್ಲಿ ಹಾಲಿ 90 ಬಸ್‌ಗಳು ಇದ್ದು, ದಿನನಿತ್ಯ ಬೆಂಗಳೂರು, ಮೈಸೂರು, ತುಮಕೂರು, ಕೊಳ್ಳೇಗಾಲ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಸ್‌ಗಳು ಸಂಚಾರದ ಜೊತೆಗೆ ಸ್ಥಳೀಯವಾಗಿ 86 ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳ ಸಂಚಾರ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ರಾಜ್ಯ ರಸ್ತೆ ಸಾರಿಗೆ ನೌಕರರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಅವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸಾರಿಗೆ ಸೇವೆಯಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಲೂಕ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಾರಿಗೆ ಸಂಸ್ಥೆ, ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ಸಾರಿಗೆ ನೌಕರರ ಮುಷ್ಕರದ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಮಂತ್ರಿಗಳು ಸಾರಿಗೆ ಸಂಸ್ಥೆ ನಿಗಮದ ನೌಕರರ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳೊಂದಿಗೆ ಸೋಮವಾರ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ಮಾತುಕತೆ ಫಲಪ್ರದವಾಗದಿದ್ದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ ನಿಲ್ದಾಣದಿಂದ ಖಾಸಗಿ ಬಸ್ ಗಳ ಕಾರ್ಯಾಚರಣೆ ಮಾಡುವಂತೆ ಮದ್ದೂರು ಸಾರಿಗೆ ಡಿಪೋ ವ್ಯವಸ್ಥಾಪಕ ರಾಘವೇಂದ್ರ ಅವರಿಗೆ ತಾಕೀತು ಮಾಡಿದರು. ಸಾರಿಗೆ ನೌಕರರ ಮುಷ್ಕರವನ್ನು ಬಂಡವಾಳ ಮಾಡಿಕೊಂಡು ಖಾಸಗಿ ಬಸ್‌ಗಳ ಮಾಲೀಕರು ಪ್ರಯಾಣಿಕರಿಂದ ದುಬಾರಿ ದರ ವಸೂಲಿ ಮಾಡುವ ಸಾಧ್ಯತೆಯಿದ್ದು, ಇದಕ್ಕೆ ಕಡಿವಾಣ ಹಾಕುವ ಮೂಲಕ ಸಾರಿಗೆ ಬಸ್‌ಗಳ ದರವನ್ನೇ ಪಾವತಿ ಮಾಡಿ ಸಾರ್ವಜನಿಕರು ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಮಾಡಲು ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರಿಗೆ ನೌಕರರ ಮುಷ್ಕರದ ಅವಧಿಯಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರು ಉಚಿತ ಪ್ರಯಾಣ ಮಾಡಲು ಅವಕಾಶವಿಲ್ಲ. ಅವರು ಟಿಕೆಟ್ ಖರೀದಿಸಿ ಪ್ರಯಾಣ ಮಾಡುವಂತೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮನವಿ ಮಾಡಿದರು.

ಸಾರಿಗೆ ನೌಕರರ ಮುಷ್ಕರದ ಅವಧಿಯಲ್ಲಿ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಬಸ್‌ಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದರು.

ಮದ್ದೂರು ಡಿಪೋ ಮ್ಯಾನೇಜರ್ ರಾಘವೇಂದ್ರ ಮಾತನಾಡಿ, ಡಿಪೋದಲ್ಲಿ ಹಾಲಿ 90 ಬಸ್‌ಗಳು ಇದ್ದು, ದಿನನಿತ್ಯ ಬೆಂಗಳೂರು, ಮೈಸೂರು, ತುಮಕೂರು, ಕೊಳ್ಳೇಗಾಲ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಸ್‌ಗಳು ಸಂಚಾರದ ಜೊತೆಗೆ ಸ್ಥಳೀಯವಾಗಿ 86 ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳ ಸಂಚಾರ ನಡೆಯುತ್ತಿದೆ. ಮುಷ್ಕರದ ಅವಧಿಯಲ್ಲಿ ಸಾಂದರ್ಭಿಕ ರಜಾ ಹೊರತು ಪಡಿಸಿ ಬೇರೆ ಯಾವುದೇ ರಜಾ ನೀಡಿಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಡಿಪೋ ಮ್ಯಾನೇಜರ್ ತಿಳಿಸಿದರು.

ಸಭೆಯಲ್ಲಿ ಮದ್ದೂರು ಪೊಲೀಸ್ ಠಾಣೆ ಕಾನೂನು ಶಿಸ್ತು ವಿಭಾಗದ ಪಿಎಸ್ಐ ಮಂಜುನಾಥ್, ಅಪರಾಧ ವಿಭಾಗದ ಪಿಎಸ್ಐ ರವಿ, ಸಂಚಾರಿ ಠಾಣೆ ಪಿಎಸ್ಐ ರಾಮಸ್ವಾಮಿ ಬೆಸಗರಹಳ್ಳಿ, ಕೊಪ್ಪ, ಕೆ.ಎಂ.ದೊಡ್ಡಿ ಪಿಎಸ್ಐಗಳಾದ ಪ್ರಕಾಶ್, ಭೀಮಪ್ಪ ಬಾಣಸಿ, ಕೆಸ್ತೂರು ಠಾಣೆ ಎಎಸ್ಐ ರಾಜು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ