ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮುಷ್ಕರದಿಂದಾಗಿ ಕೆ.ಆರ್.ಪೇಟೆ ಬಸ್ ಡಿಪೋ ಹಾಗೂ ನಿಲ್ದಾಣದಿಂದ ಯಾವುದೇ ಬಸ್ ಸಂಚಾರಕ್ಕಿಳಿಯಲಿಲ್ಲ. ಇದರಿಂದ ಪ್ರಯಾಣಿಕರ ಪರದಾಟ ಹೇಳತೀರದಾಗಿತ್ತು. ಪಟ್ಟಣದ ಮಾರ್ಗವಾಗಿ ನಾಡಿನ ಇತರೆ ಜಿಲ್ಲೆಗಳನ್ನು ಸಂಪರ್ಕಿಸುವ ಹೊರಗಿನ ಡಿಪೋಗಳ ಬಸ್ ಸಂಚಾರವೂ ಸ್ಥಗಿತಗೊಂಡಿದ್ದರಿಂದ ಪಟ್ಟಣದಿಂದ ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೋಗ್ಗ ಸೇರಿದಂತೆ ದಕ್ಷಿಣ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯ ಕೊಂಡಿ ಕಳಚಿ ಬಿದ್ದಿತ್ತು.
ಇದರ ಪರಿಣಾಮ ದೈನಂದಿನ ವ್ಯವಹಾರಗಳಿಗೆ ನಿತ್ಯ ಸಂಚರಿಸುವ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು. ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಿಗೆ ಗ್ರಾಮೀಣ ಪ್ರದೇಶದಿಂದ ಆಗಮಿಸುವ ವಿದ್ಯಾರ್ಥಿಗಳಿಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿತ್ತು. ಬಹುತೇಕ ಶಾಲಾ-ಕಾಲೇಜುಗಳಲ್ಲಿ ಹಾಜರಾತಿಯ ಕೊರತೆ ಕಾಣುತ್ತಿತ್ತು. ಗ್ರಾಮೀಣ ಸಾರಿಗೆ ಸಂಪರ್ಕ ಕಡಿತಗೊಂಡಿದ್ದ ಪರಿಣಾಮ ಪಟ್ಟಣದ ದೈನಂದಿನ ವಾಣಿಜ್ಯ ವ್ಯಹಾರಗಳೂ ಕುಂಠಿತಗೊಂಡಿದ್ದವು. ಬಸ್ ಸಂಚಾರವಿಲ್ಲದೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.ಪಟ್ಟಣದ ಬಸ್ ಡಿಪೋನಲ್ಲಿ 76 ಬಸ್‌ಗಳಿದ್ದು ಚಾಲಕರು ಮತ್ತು ನಿರ್ವಾಹಕರು 152 ಜನರಿದ್ದಾರೆ. ನಿತ್ಯ 70 ಷೆಡ್ಯೂಲ್ ಬಸ್ ಸಂಚಾರ ನಡೆಯುತ್ತಿತ್ತು. ಸಾರಿಗೆ ನೌಕರರ ಮುಷ್ಕರದ ಪರಿಣಾಮ ಡಿಪೋನಿಂದ ಒಂದೇ ಒಂದು ಬಸ್ ರಸ್ತೆಗೆ ಇಳಿಯಲಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಡಿಪೋ ಮ್ಯಾನೇಜರ್ ಉಮಾ ಮಹೇಶ್ವರಿ ಡಿಪೋ ಬಾಗಿಲು ಬಂದ್ ಮಾಡಿಸಿ ಕಾವಲು ವ್ಯವಸ್ಥೆ ಮಾಡಿದ್ದರು. ಮತ್ತಷ್ಟು ಬಸ್‌ಗಳನ್ನು ಚಲಾಯಿಸದೆ ಸಾರಿಗೆ ಇಲಾಖೆಯ ಚಾಲಕರು ಬಸ್ ನಿಲ್ದಾಣದಲ್ಲಿಯೇ ಬಸ್‌ಗಳನ್ನು ಸಾಲಾಗಿ ನಿಲ್ಲಿಸಿ ಮುಷ್ಕರಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.