ಪ್ರವಾಸ ಬದುಕಿಗೆ ಹೊಸ ಆಯಾಮ ತರುತ್ತದೆ

KannadaprabhaNewsNetwork | Published : Dec 10, 2024 12:30 AM

ಸಾರಾಂಶ

ಮನುಷ್ಯನಿಗೆ ಸಂತೋಷ ಎನ್ನುವುದು ಬಹಳ ಮುಖ್ಯ. ಪ್ರವಾಸ ಮನುಷ್ಯನ ಬದುಕಿಗೆ ಹೊಸ ಆಯಾಮವನ್ನು ತಂದುಕೊಡುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮನುಷ್ಯನಿಗೆ ಸಂತೋಷ ಎನ್ನುವುದು ಬಹಳ ಮುಖ್ಯ. ಪ್ರವಾಸ ಮನುಷ್ಯನ ಬದುಕಿಗೆ ಹೊಸ ಆಯಾಮವನ್ನು ತಂದುಕೊಡುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಎಸ್‌ಎಸ್‌ ರಂಗಂದಿರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ಇತ್ತಿಚಿಗೆ ನಡೆದ ಇಂಡೋನೇಷಿಯಾ, ಮಲೇಷಿಯಾ ಹಾಗೂ ಥೈಲ್ಯಾಂಡ್ ದೇಶಗಳ ವಚನ ಸಂಸ್ಕೃತಿ ಯಾತ್ರೆಯ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರವಾಸದಲ್ಲಿ ನಮ್ಮ ವ್ಯಕ್ತಿತ್ವವನ್ನು ಹೇಗೆ ಕಟ್ಟಿಕೊಳ್ಳಬಹುದು, ಶರಣರ ವಿಚಾರಗಳನ್ನು ಹೇಗೆ ವಿಶ್ವವ್ಯಾಪಿ ಮಾಡಬಹುದು ಎನ್ನುವುದಕ್ಕೆ ಇಂಡೋನೇಷಿಯಾ, ಮಲೇಷಿಯಾ ಹಾಗೂ ಥೈಲ್ಯಾಂಡ್ ಪ್ರವಾಸವೇ ಸಾಕ್ಷಿ . ಇಂತಹ ಕೂಟದಲ್ಲಿ ಸೇರಿಕೊಂಡಾಗ ಹೊಸ ಹೊಸ ಆಲೋಚನೆಯನ್ನು ಮಾಡಲಿಕ್ಕೆ, ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಿಕ್ಕೆ ಇದು ಪ್ರೇರಣೆ ನೀಡಲಿ ಎನ್ನುವುದು ನಮ್ಮ ಆಶಯ ಎಂದರು.

ವಿಶ್ವಗುರು ಬಸವಣ್ಣ , ನಮಗೆ ದೀಕ್ಷೆ ನೀಡಿ ನಮ್ಮ ಬದುಕನ್ನು ಕಟ್ಟಿಕೊಟ್ಟ ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ನಮ್ಮ ಭಕ್ತರ ಕೃಪೆಯಿಂದ ಕಳೆದ 45 ವರ್ಷಗಳಲ್ಲಿ ಸಾಣೇಹಳ್ಳಿ ಎಂಬ ಪುಟ್ಟ ಹಳ್ಳಿ ಇಡೀ ರಾಜ್ಯವೆ ತಿರುಗಿ ನೋಡುವಂತೆ ಆಗಿದೆ. ಈ ಮೂರು ಜನರನ್ನು ನಾವು ಎಂದೂ ಮರೆಯಲಿಕ್ಕೆ ಸಾಧ್ಯವಿಲ್ಲ. ಇವತ್ತು ಸಾಣೇಹಳ್ಳಿ ಅಂದರೆ ರಂಗಭೂಮಿ, ಸಾಹಿತ್ಯ ಧರ್ಮದ ನೆಲೆಯಲ್ಲಿ ಎಲ್ಲರೂ ತಿರುಗಿ ನೋಡುವ ಹಾಗೆ ಆಗಿದೆ. ಒಂದು ಕಾಲದಲ್ಲಿ ಮಠಗಳು, ಮಠಾಧೀಶರು ಅಂದರೆ ಮೂಗು ಮುರಿಯುತ್ತಿದ್ದ ಅನೇಕ ವೈಚಾರಿಕರು, ಬಂಡಾಯಗಾರರು , ದಲಿತ ಪ್ರಜ್ಞೆ ಇರುವಂಥವರು ಈಗ ತುಂಬ ಹತ್ತಿರ ಆಗುತ್ತಿದ್ದಾರೆ ಎಂದರು.

ಬೆಟ್ಟಹಳ್ಳಿಯ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ನಾಲ್ಕು ವರ್ಗದ ಸಂನ್ಯಾಸಿಗಳಿರುತ್ತಾರಂತೆ. ನಮ್ಮಲ್ಲಿ ಎಕ್ಸ್ ಪಿರಿಡೇಟ್ ಸ್ವಾಮೀಜಿಯವರಿದ್ದಾರೆ. ಅವರು ಹೇಗಿರುತ್ತಾರೆ ಅಂದರೆ ನಮ್ಮ ಕಾಲ ಬಹಳ ಚೆಂದ ಇತ್ತು. ಐದು ರೂಪಾಯಿ ತೆಗೆದುಕೊಂಡು ಹೋದರೆ ಮನೆತುಂಬ ರೇಷನ್ ಬರ್ತಾ ಇತ್ತು. ಮಠ ನಡೆಸ್ತಾ ಇದ್ವಿ. ಕಾಲ ಕೆಟ್ಟು ಹೋಗಿದೆ ಅಂತ ಹೇಳ್ತಿರ್ತಾರೆ. ಅಂತವರಿಗೆ ನಾನು ಹೇಳುವುದು ಕಾಲೇ ಕೊಳಕಾಗಿರುವ ಸ್ವಾಮಿಗಳು ಇದ್ದರೆಷ್ಟು ಸತ್ತರೆಷ್ಟು ಅವರೆಲ್ಲಾ ಬದುಕಿನಲ್ಲಿ ಎಕ್ಸ್ಪೈರ್ ಆಗಿರುವ ಸ್ವಾಮಿಗಳು. ಯಾಕೆಂದರೆ ಮನುಷ್ಯ ವಾಸ್ತವ ಪ್ರಜ್ಞೆಯಲ್ಲಿ ಬದುಕುವವನು ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಶಿವರುದ್ರ ಸ್ವಾಮೀಜಿ, ಸಾಹಿತಿ ಬಿ ಆರ್. ಪೋಲಿಸ್ ಪಾಟೀಲ್ , ಶರಣ ಸಾಹಿತ್ಯ ಚಿಂತಕ ರಂಜಾನ್ ದರ್ಗಾ ಮಾತನಾಡಿದರು.

ಸಾ.ನಿ. ರವಿಕುಮಾರ ಸ್ವಾಗತಿಸಿದರೆ ರಾಜು ನಿರೂಪಿಸಿ ವಂದಿಸಿದರು. ರಾಷ್ಟ್ರೀಯ ಬಸವ ಪ್ರತಿಷ್ಠಾನದ ಪದಾಧಿಕಾರಿಗಳನ್ನು ಶ್ರೀಮಠದಿಂದ ಅಭಿನಂದಿಸಲಾಯಿತು.

-------

9ಎಚ್‌ಎಸ್‌ಡಿ1:

ಸಾಣೆಹಳ್ಳೀಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.

Share this article