ಮಡಿಕೇರಿ: ಹಿರಿಯ ನಾಗರಿಕರನ್ನು ಗೌರವ ಹಾಗೂ ಸಂತೋಷದಿಂದ ನೋಡಿಕೊಳ್ಳುವುದು ಪ್ರತಿಯೊಂದು ಕುಟುಂಬದ ಜವಾಬ್ದಾರಿಯಾಗಿದೆ. ಹಿರಿಯರು ನೆಮ್ಮದಿಯಿಂದ ಇರುವ ಮನೆ ಹಾಗೂ ಸಮಾಜವೇ ನಿಜವಾದ ಸಮೃದ್ಧಿಯ ಸಂಕೇತ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅಭಿಪ್ರಾಯಪಟ್ಟರು.
ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಮುಖ್ಯಸ್ಥರಾದ ಪ್ರಭುಸ್ವಾಮಿ ಮಾತನಾಡಿ, ಹಿರಿಯರು ಕುಟುಂಬ ಹಾಗೂ ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ ಎಂದರು.
ಅ.1 ರಂದು ನಡೆಯಲಿರುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಹಬ್ಬದಂತೆ ಆಚರಿಸುವಂತಾಗಬೇಕು ಎಂದು ಹೇಳಿದರು.ಹಿರಿಯ ನಾಗರಿಕರು ಯಾವುದೇ ಸಮಸ್ಯೆ ಎದುರಾದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ 1090 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದರು.ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾದ ಶಂಕರಿ ಪೊನ್ನಪ್ಪ ಅವರು ಮಾತನಾಡಿ, ಹಿರಿಯ ನಾಗರಿಕರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಸೌಲಭ್ಯ ಹಾಗೂ ಸಹಕಾರವನ್ನು ಅಧಿಕಾರಿಗಳು ಒದಗಿಸಬೇಕು ಎಂದು ಹೇಳಿದರು.ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶೈಲಜಾ ಮಾತನಾಡಿದರು. ಆಟೋಟ ಸ್ಪರ್ಧೆಯನ್ನು ಉಪ ವಿಭಾಗಧಿಕಾರಿ ನಿತಿನ್ ಚಕ್ಕಿ ಅವರು ಉದ್ಘಾಟಿಸಿ, ಶುಭ ಹಾರೈಸಿದರು.ಜಿಲ್ಲಾ ನಿರೂಪಣಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಆರ್.ಪ್ರಸನ್ನ ಕುಮಾರ್, ಮಡಿಕೇರಿ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ತಿಮ್ಮಯ್ಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಾದಮ್ಮಯ್ಯ, ಎಂ.ಎಸ್.ಸುಬ್ರಮಣಿ, ಪ್ರಭುಸ್ವಾಮಿ, ಮಾದೇವ ಸ್ವಾಮಿ, ಆಯುಷ್ ಇಲಾಖೆ ಸಿಬ್ಬಂದಿ, ಹಿರಿಯ ನಾಗರಿಕರು ಪಾಲ್ಗೊಂಡಿದ್ದರು. ಹಿರಿಯ ನಾಗರಿಕ ಎಚ್.ಆರ್.ಸುಂದರಮ್ಮ ಪ್ರಾರ್ಥಿಸಿದರು. ಮಾಹಿತಿ ಸಲಹೆಗಾರ ನವೀನ್ ನಿರೂಪಿಸಿದರು, ಜಿಲ್ಲಾ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲಾ ವಂದಿಸಿದರು.100 ಮೀಟರ್ ಓಟ, ವೇಗದ ನಡಿಗೆ, ಬಕೆಟ್ ಗೆ ಬಾಲ್ ಎಸೆಯುವ ಸ್ಪರ್ಧೆ, ಪಾಸಿಂಗ್ ದ ಬಾಲ್, ಗಾಯನ ಸ್ಪರ್ಧೆ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಆಟೋಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.