ಬಳ್ಳಾರಿ: ಮೆದುಳು ಆರೋಗ್ಯ ಸಂಬಂಧಿಸಿದ ಕಾಯಿಲೆಗಳಿಗೆ ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞರಿಂದ ಸೌಲಭ್ಯವಿದ್ದು, ಇದರ ಸದುಪಯೋಗವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದರು.
ಮೆದುಳು ಮತ್ತು ನರ ಸಮಸ್ಯೆಗಳಿಗೆ ಜನತೆಯು ಸಾಮಾನ್ಯವಾಗಿ ನಗರದ ವಿಮ್ಸ್ ತಪ್ಪಿದರೆ ಬೆಂಗಳೂರು ಮತ್ತು ಧಾರವಾಡಕ್ಕೆ ತೆರಳುತ್ತಾರೆ. ಇದನ್ನು ತಪ್ಪಿಸಲು ಜಿಲ್ಲಾ ಆಸ್ಪತ್ರೆಯಲ್ಲಿಯೇ ತಜ್ಞರ ಸೌಲಭ್ಯವನ್ನು ಒದಗಿಸಿರುವುದರಿಂದ ಜನತೆಗೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕ್ಷೇತ್ರ ಮಟ್ಟದಲ್ಲಿ ನೀಡಬೇಕು. ಅನಗತ್ಯ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಕುಟುಂಬದ ಸದಸ್ಯರ ನೆಮ್ಮದಿಯ ಜೀವನಕ್ಕೆ ಕ್ಷೇತ್ರ ಮಟ್ಟದಲ್ಲಿ ಜಾಗೃತಿಗೊಳಿಸಬೇಕು ಎಂದು ತಿಳಿಸಿದರು.
ರಾಷ್ಟ್ರದ ಹೆಸರಾಂತ ಮನೋ ಆರೈಕೆ ಕೇಂದ್ರವಾಗಿರುವ ನಿಮಾನ್ಸ್ ಸಹಯೋಗ ಮತ್ತು ಸಲಹೆಗಳೊಂದಿಗೆ ನರರೋಗ ತಜ್ಞರ ಉಪಸ್ಥಿತಿಯಲ್ಲಿ ಮೆದುಳು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಆಪ್ತಸಮಾಲೋಚನೆ ನಡೆಸಲಾಗುವುದು. ಮುಖ್ಯವಾಗಿ ಪಾರ್ಶ್ವವಾಯು, ಅಪಸ್ಮಾರ, ಮರೆವು ಕಾಯಿಲೆ ಮತ್ತು ತಲೆನೋವು ಸೇರಿದಂತೆ ನರ ವೈಜ್ಞಾನಿಕ ಕಾಯಿಲೆಗಳಿಂದ ಬಳಲುತ್ತಿರುವವರು ಆರಂಭಿಕ ಹಂತದಲ್ಲಿಯೇ ತಜ್ಞರನ್ನು ಸಂಪರ್ಕಿಸುವ ಮೂಲಕ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು.ಜಿಲ್ಲಾ ಮಾನಸಿಕ ಆರೋಗ್ಯ ಅನುಷ್ಟಾನ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಮಾತನಾಡಿ, ಈಗಾಗಲೇ ಜಿಲ್ಲಾ ಶಸ್ತ್ರ ಚಿಕಿತ್ಸಕರ ಅಧೀನದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮೆದುಳು ಆರೋಗ್ಯ ವಿಭಾಗ ಆರಂಭಿಸಲಾಗಿದ್ದು, ವೈದ್ಯರು ಫಿಜಿಯೋಥೆರಫಿಸ್ಟ್, ಸ್ಪೀಚ್‌ಥೆರಫಿಸ್ಟ್, ಮನೋಶಾಸ್ತ್ರಜ್ಞರು, ಶುಶ್ರೂಷಣಾಧಿಕಾರಿ ಒಳಗೊಂಡ ವೈದ್ಯಕೀಯ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ, ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕ ಸಣ್ಣ ಕೇಶವ್, ಡಿಎಸ್‌ಆರ್‌ಸಿ ಆಪ್ತ ಸಮಾಲೋಚಕರಾದ ಪರಿಮಳ ಸೇರಿದಂತೆ ಜಿಲ್ಲೆಯ ಎಲ್ಲ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು ಉಪಸ್ಥಿತರಿದ್ದರು.