ಮಹೇಶ ಛಬ್ಬಿಗದಗ: ಗದಗ- ಮುಳಗುಂದ ರಸ್ತೆಬದಿಯ ಮರಗಳನ್ನು ತೆರವುಗೊಳಿಸದಂತೆ ಸಾರ್ವಜನಿಕರು, ಪರಿಸರಪ್ರೇಮಿಗಳು ಆಕ್ಷೇಪಣೆ ಸಲ್ಲಿಸಿ ಗೋಗರೆದರೂ ಅರಣ್ಯ ಇಲಾಖೆ ಮಾತ್ರ ಮರಗಳ ತೆರವು ಕಾರ್ಯ ನಡೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ನೂರಾರು ವರ್ಷಗಳಿಂದ ರಸ್ತೆಯ ಸೌಂದರ್ಯ ಹೆಚ್ಚಿಸಿ, ದಣಿದವರಿಗೆ, ವಾಹನ ಸವಾರರಿಗೆ ನೆರಳು ನೀಡಿ, ಜೀವ ಸಂಕುಲಗಳಿಗೆ ಆಶ್ರಯ ನೀಡಿದ ಮರಗಳನ್ನು ತೆರವುಗೊಳಿಸಲು ಮಾ. 13ರ ವರೆಗೆ ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಸೂಚನೆ ನೀಡಲಾಗಿತ್ತು.
ಈ ಬಗ್ಗೆ ಆಕ್ಷೇಪಣೆಗಳು ಅರಣ್ಯ ಇಲಾಖೆಗೆ ಸಲ್ಲಿಕೆಯಾಗಿದ್ದು, ಅದಕ್ಕೆ ಉತ್ತರ ಈವರೆಗೂ ನೀಡಿಲ್ಲ. ಆದರೆ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸುತ್ತಿದ್ದಾರೆ. ಹೀಗಿದ್ದಲ್ಲಿ ಸಾರ್ವಜನಿಕರ ಅಭಿಪ್ರಾಯವನ್ನಾದರೂ ಏಕೆ ಕೇಳಿದರು? ಅದಕ್ಕೆ ಉತ್ತರ ನೀಡದೇ ಅರಣ್ಯ ಇಲಾಖೆ ಮರಗಳ ತೆರವು ಕಾರ್ಯ ನಡೆಸಿದೆ. ಆಕ್ಷೇಪಣೆ ಅರ್ಜಿಗಳಿಗೆ ಯಾವುದೇ ರೀತಿಯ ಮೌಲ್ಯವೇ ಇಲ್ಲ. ಅಲ್ಲದೇ ಮರಗಳ ತೆರವಿಗೆ ಸಾರ್ವಜನಿಕ ವಲಯದಲ್ಲಿ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಕೆಯಾದಲ್ಲಿ ತೆರವು ಕಾರ್ಯ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಏಕಾಏಕಿ ಮರಗಳನ್ನು ತೆರವುಗೊಳಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.ಇತ್ತೀಚೆಗೆ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. ಕಾಮಗಾರಿ ಕೈಗೊಳ್ಳುವ ಮುನ್ನವೇ ಲೋಕೋಪಯೋಗಿ ಇಲಾಖೆ ರಸ್ತೆಗೆ ಅಡ್ಡಬರುವ ಮರಗಳ ತೆರವು ಕೈಗೊಳ್ಳದೇ ಹಾಗೆ ಬಿಟ್ಟಿದೆ. ರಸ್ತೆ ಅಭಿವೃದ್ಧಿಯಾದ ನಂತರ ಮರಗಳ ತೆರವು ಕಾರ್ಯ ನಡೆಸಿದ್ದು, ಜನತೆಗೆ ಅಚ್ಚರಿ ಮೂಡಿಸಿದೆ.ಹಲವು ವರ್ಷಗಳಿಂದ ರಸ್ತೆಯ ಎರಡೂ ಬದಿಯಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಹುಣಸೆ ಹಾಗೂ ಬೇವಿನ ಮರಗಳು ರಸ್ತೆಯ ಸೌಂದರ್ಯಕ್ಕೆ ಕಾರಣವಾಗಿದೆ. ಅಲ್ಲದೆ ರಸ್ತೆಬದಿಗಳಲ್ಲಿ 250ಕ್ಕೂ ಹೆಚ್ಚು ಮರಗಳಿವೆ. ಮಳೆಗಾಲದಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸಿ, ಬೇಸಿಗೆಯಲ್ಲಿ ತಂಪಿನ ವಾತಾವರಣ ನೀಡುತ್ತಿವೆ. ಬಿರುಬಿಸಿಲಿನ ತಾಪದಲ್ಲಿ ರಸ್ತೆ ಮೇಲೆ ಹೋಗುತ್ತಿದ್ದರೆ ಮರಗಳು ನೆರಳು ನೀಡುತ್ತಿವೆ. ವಾಹನ ಸವಾರರಿಗೆ ಆಹ್ಲಾದಕರ ವಾತಾವರಣ ಅನುಭವ ನೀಡುತ್ತಿದೆ. ಹೀಗಿದ್ದರೂ ಮರಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ.ಪವನ ವಿದ್ಯುತ್ ಕಂ ಒತ್ತಡ?ಸದ್ಯ ಮುಳಗುಂದ ವ್ಯಾಪ್ತಿಯ ರೈತರ ಹೊಲಗಳಲ್ಲಿ ಪವನ ವಿದ್ಯುತ್ ಕಂಪನಿ ಫ್ಯಾನ್‌ಗಳ ಅಳವಡಿಕೆ ಕೆಲಸ ಪ್ರಾರಂಭಿಸಿದ್ದು, ಅದಕ್ಕೆ ಸಂಬಂಧಿಸಿದ ಫ್ಯಾನ್ ರೆಕ್ಕೆಗಳು, ಇನ್ನಿತರ ಸಲಕರಣೆಗಳು ಬೃಹತ್ ವಾಹನಗಳಲ್ಲಿ ಗದಗದಿಂದ ಮುಳಗುಂದಕ್ಕೆ ಇದೇ ರಸ್ತೆ ಮಾರ್ಗದಲ್ಲಿಯೇ ಬರುವುದರಿಂದ ಅವುಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ ಎನ್ನುವ ಕಾರಣದಿಂದ ಪವನ ವಿದ್ಯುತ್ ಕಂ. ಒತ್ತಡಕ್ಕೆ ಮಣಿದು ಮರಗಳ ತೆರವಿಗೆ ಮುಂದಾಗಿದ್ದಾರೆಯೇ ಎನ್ನುವ ಅನುಮಾನವಿದೆ ಎನ್ನುತ್ತಾರೆ ಸ್ಥಳೀಯರು.ಕ್ರಮ ಕೈಗೊಳ್ಳಲಿ: ಗದಗ- ಮುಳಗುಂದ ರಸ್ತೆಯ ಅಕ್ಕಪಕ್ಕದ ಮರಗಳನ್ನು ತೆರವುಗೊಳಿಸದಂತೆ ಆಕ್ಷೇಪಣೆ ಸಲ್ಲಿಸಿದ್ದೇವು. ಆದರೆ ಅದಕ್ಕೆ ಉತ್ತರ ನೀಡದೆ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಮೇಲಧಿಕಾರಿಗಳು ಎಲ್ಲ ಸೇರಿ ತೀರ್ಮಾನ ತೆಗೆದುಕೊಂಡು ಮರ ತೆರವು ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಉತ್ತರ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಪರಿಸರಪ್ರೇಮಿ ಬಸವರಾಜ ರಾಮರೆಡ್ಡಿ ತಿಳಿಸಿದರು.