- ಸುಂಕದಕಟ್ಟೆ ಗ್ರಾಮಸ್ಥರೊಂದಿಗೆ ತೆರಳಿ ವಿವಾದಿತ ಸ್ಥಳ ಪರಿಶೀಲಿಲನೆ
ಹೊನ್ನಾಳಿ: ಇಲ್ಲಿಯ ಪುರಸಭೆ ವ್ಯಾಪ್ತಿಯ ಸುಂಕದಕಟ್ಟೆ ಗ್ರಾಮ ಸಮೀಪದ ಮಲ್ಲದೇವರಕಟ್ಟೆ ಸರ್ವೆ ನಂ.4ರ 29.17 ಗುಂಟೆ ಅರಣ್ಯ ಪ್ರದೇಶದಲ್ಲಿ ನಿವೇಶನರಹಿತರಿಗೆ ವಸತಿ ಕಲ್ಪಿಸಲು ಮರಗಳ ತೆರವಿಗೆ ಅರಣ್ಯ, ಕಂದಾಯ, ಪುರಸಭೆ ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶದಲ್ಲಿ ವಸತಿ ಕಲ್ಪಿಸಲು ಗಿಡ-ಮರಗಳನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸೋಮವಾರ ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, 2020-21ರಲ್ಲಿ ತಾನು ಅಧಿಕಾರದಲ್ಲಿ ಇದ್ದಾಗ ಈ ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದಕಾರಣ ಖುದ್ದಾಗಿ ಈ ಪ್ರದೇಶದಲ್ಲಿ ನಿವೇಶನ ರಹಿತರಿಗಾಗಿ ಜಾಗ ಮಂಜೂರಾತಿ ಮಾಡಿಸಿದ್ದೆ. ಅನಂತರ ಈ ಪ್ರದೇಶದ ಬಗ್ಗೆ ಸ್ಥಳೀಯ ಗ್ರಾಮಸ್ಥರು, ರೈತರಿಂದ ಸಮಗ್ರ ಮಾಹಿತಿ ಪಡೆದು 2023ರಲ್ಲಿ ತಾನೇ ಮಾಡಿಸಿದ್ದ ನಿವೇಶನ ಮಂಜೂರಾತಿ ಆದೇಶ ಕೂಡಲೇ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.ಮಲ್ಲದೇವರಕಟ್ಟೆ ಪ್ರದೇಶದ ಬಗ್ಗೆ ರಾಜಕೀಯ ಮಾಡಲಾರೆ. ಯಾರೂ ರಾಜಕೀಯ ಮಾಡದೇ ಸ್ಥಳೀಯರ ಕಷ್ಟ-ಸುಖಗಳಿಗೆ ಸ್ಪಂದಿಸುವುದು ಮುಖ್ಯವಾಗಿದೆ. ಗ್ರಾಮಸ್ಥರ ಕೋರಿಕೆ ಮೇರೆಗೆ ಇದೀಗ ಈ ಸ್ಥಳಕ್ಕೆ ಖುದ್ದಾಗಿ ಭೇಟಿ ಮಾಡಿ ಸಮಗ್ರ ಪ್ರದೇಶದ ಬಗ್ಗೆ ಮಾಹಿತಿಗಳನ್ನು ಪಡೆದಿದ್ದೇನೆ. ಈ ಪ್ರದೇಶಲ್ಲಿ 2 ಸಾವಿರಕ್ಕೂ ಹೆಚ್ಚು ಗಂಧದ ಮರಗಳು ಇವೆ. ಇನ್ನೂ ಅನೇಕ ಉತ್ತಮ ಜಾತಿಯ ಗಿಡ-ಮರಗಳಿವೆ. ಜೊತೆಗೆ ನವಿಲು, ಕರಡಿ ಸೇರಿದಂತೆ ವನ್ಯಜೀವಿಗಳು, ಪ್ರಾಣಿ-ಪಕ್ಷಿಗಳು ಆಶ್ರಯ ಪಡೆದಿವೆ. ಈ ಪ್ರದೇಶದ 4 ಎಕರೆ ವ್ಯಾಪ್ತಿಯಲ್ಲಿ ಕೆರೆ ಕೂಡ ಇದೆ. ಇದು ಇಲ್ಲಿನ ಜಾನುವಾರುಗಳಿಗೆ, ಪಕ್ಷಿಗಳಿಗೆ ಕುಡಿಯುವ ನೀರಿನ ಅಶ್ರಯ ತಾಣವಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹೋರಾಟಗಾರ ನರಸಿಂಹ ಮೂರ್ತಿ, ರೈತ ಮುಖಂಡ ಕರಿಬಸಪ್ಪ, ಅರಬಗಟ್ಟೆ ಗ್ರಾ.ಪಂ, ಮಾಜಿ ಅಧ್ಯಕ್ಷ ಎಸ್.ಆರ್.ಮಂಜುನಾಥ್, ಮಾಜಿ ಸದಸ್ಯ ಎ.ಕೆ. ರುದ್ರಪ್ಪ, ವಸಂತಪ್ಪ, ಎಸ್.ಮಂಜಪ್ಪ ಮುಂತಾದವರು ಇದ್ದರು.
(ಬಾಕ್ಸ್) * ಜಾನುವಾರುಗಳೊಂದಿಗೆ ಪ್ರತಿಭಟನೆ
- - -
ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ಮಲ್ಲದೇವರಕಟ್ಟೆ ಪ್ರದೇಶಕ್ಕೆ ಸೋಮವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗ್ರಾಮದವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.