ಕನ್ನಡಪ್ರಭ ವಾರ್ತೆ ಹನೂರು ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವುದನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧ ಮಾಡಿರುವುದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಜೀಪ್ ಚಾಲಕರು ಅರಣ್ಯಾಧಿಕಾರಿಗಳ ಬಳಿ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ. ರಾಜ್ಯದ ಚಾರಣ ಸ್ಥಳಗಳಲ್ಲಿ ಟ್ರಕ್ಕಿಂಗ್ ಹೋಗುವವರ ಸಂಖ್ಯೆಯನ್ನು ಮಿತಿಗೊಳಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಈ ದಿಸೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವವರನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಜ.26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಮಾರ ಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿ ರಾತ್ರಿ ತಂಗಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪರಿಸರ ತಜ್ಞರು ಅರಣ್ಯ ಉಳಿವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಗಿರಿ ಪ್ರದೇಶಗಳಿಗೆ ಪ್ರತಿವಾರವೂ ಸಾವಿರಾರು ಚಾರಣಿಗರು ಆಗಮಿಸಿದರೆ ಅವರನ್ನು ನಿಯಂತ್ರಿಸುವುದು, ತಪಾಸಣೆ ಮಾಡುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗುತ್ತದೆ. ಜತೆಗೆ ಪರಿಸರಕ್ಕೂ ಹಾನಿಯಾಗುತ್ತದೆ. ಜಲ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು. ಇದನ್ನು ಮನಗಂಡು ರಾಜ್ಯದ ಎಲ್ಲಾ ಚಾರಣ ತಾಣಗಳಲ್ಲೂ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಹಾಗೂ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಚಾರಣ ತಾಣಗಳಲ್ಲಿ ಚಾರಣಿಗರನ್ನು ನಿರ್ಬಂಧಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದರು.
ಮೂಲಭೂತ ಸೌಲಭ್ಯಗಳಿಲ್ಲದ ಈ ಭಾಗದಲ್ಲಿ ರಸ್ತೆ, ವಿದ್ಯುತ್ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸಲು ಆಸಕ್ತಿ ತೋರದ ಅರಣ್ಯ ಸಚಿವರು ಇಂತಹ ಕಠಿಣ ನಿಯಮಗಳನ್ನು ಹೊರಡಿಸಿ ಕಾಡಂಚಿನ ಜನತೆಗೆ ತೊಂದರೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜೀಪ್ ಚಾಲಕ ಮುರುಗೇಶ್ ಹಾಗೂ ಬೆಳ್ಳಿ ಇನ್ನಿತರ ಚಾಲಕರು ತಮ್ಮ ಆಕ್ರೋಶವ್ಯಕ್ತಪಡಿಸಿದ್ದಾರೆ.