ಪುತ್ತೂರು ನಗರಸಭಾ ಉಪಚುನಾವಣೆ ಶಾಂತಿಯುತ

KannadaprabhaNewsNetwork | Published : Dec 28, 2023 1:47 AM

ಸಾರಾಂಶ

ಪುತ್ತೂರು ನಗರಸಭೆಯಲ್ಲಿ ತೆರವಾಗಿರುವ ಎರಡು ವಾರ್ಡ್‌ಗಳಿಗೆ ಉಪಚುನಾವಣೆ ನಡೆದಿದ್ದು, ಶಾಂತಿಯುತವಾಗಿ ಮತದಾನವಾಗಿದೆ.

ಕನ್ನಡಪ್ರಭವಾರ್ತೆ ಪುತ್ತೂರು

ನಗರ ಸಭೆಯ ವಾರ್ಡ್ ೧ ಹಾಗೂ ವಾರ್ಡ್ ೧೧ರ ಸದಸ್ಯರಿಬ್ಬರ ನಿಧನದಿಂದಾಗಿ ತೆರವಾಗಿದ್ದ ಎರಡು ಸ್ಥಾನಗಳಿಗೆ ಬುಧವಾರ ಉಪಚುನಾವಣೆ ಶಾಂತಿಯುತವಾಗಿ ನಡೆಯಿತು. ಬೆಳಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯ ತನಕ ಮತದಾನ ಪ್ರಕ್ರಿಯೆ ನಡೆಯಿತು. ವಾರ್ಡ್ ೧ರಲ್ಲಿ ಶೇ. ೭೩.೪೬ ಹಾಗೂ ವಾರ್ಡ್ ೧೧ರಲ್ಲಿ ೬೧.೦೭ ಶೇ.ಮತದಾನವಾಗಿದೆ. ವಾರ್ಡ್ ೧ಕ್ಕೆ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆ ಉತ್ತರ ಭಾಗದಲ್ಲಿ ತೆರೆಯಲಾಗಿರುವ ಮತಗಟ್ಟೆಯಲ್ಲಿ ಮತದಾನ ನಡೆಸಲಾಯಿತು. ಈ ವಾರ್ಡ್‌ನಲ್ಲಿ ೬೩೪ ಪುರುಷರು, ೬೭೦ ಮಹಿಳೆಯರು ಸೇರಿದಂತೆ ಒಟ್ಟು ೧೩೦೪ ಮತದಾರರಿದ್ದು, ಈ ಪೈಕಿ ೪೪೯ ಪುರುಷರು, ೫೦೯ ಮಹಿಳೆಯರು ಸೇರಿದಂತೆ ಒಟ್ಟು ೯೫೮ ಮತದಾರರು ಮತ ಚಲಾಯಿಸಿದ್ದಾರೆ. ಶೇ. ೭೩.೪೬ ಮತದಾನವಾಗಿದೆ.

ವಾರ್ಡ್ ೧೧ರ ಮತದಾನವು ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾಗ ಸಂಖ್ಯೆ ೧೩ ಹಾಗೂ ಭಾಗ ಸಂಖ್ಯೆ ೧೪ ಎರಡು ಮತಗಟ್ಟೆಗಳಲ್ಲಿ ನಡೆಯಿತು. ಈ ವಾರ್ಡ್‌ನಲ್ಲಿ ೮೫೬ ಪುರುಷರು, ೮೬೮ ಮಹಿಳೆಯರು ಸೇರಿದಂತೆ ಒಟ್ಟು ೧೭೨೪ ಮತದಾರರಿದ್ದು, ಈ ಪೈಕಿ ೫೨೫ ಪುರುಷರು, ೫೨೮ ಮಹಿಳೆಯರು ಸೇರಿದಂತೆ ಒಟ್ಟು ೧೦೫೩ ಮತದಾರರು ಮತ ಚಲಾಯಿಸಿದ್ದಾರೆ. ಇಲ್ಲಿ ಶೇ.೬೧.೦೭ ಮತದಾನವಾಗಿದೆ.

ವಾರ್ಡ್ ೧ರ ಸಾಮಾನ್ಯ ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಬಿಜೆಪಿಯ ಶಿವರಾಮ ಸಪಲ್ಯ ಹಾಗೂ ವಾರ್ಡ್ ೧೧ರ ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಕಾಂಗ್ರೆಸ್‌ನ ಶಕ್ತಿ ಸಿನ್ಹ ಅವರ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆದಿತ್ತು. ವಾರ್ಡ್ ೧ರ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಸುನೀತಾ ಶಿವನಗರ, ಕಾಂಗ್ರೆಸ್‌ನಿಂದ ದಿನೇಶ್ ಕೆ. ಶೇವಿರೆ ಮತ್ತು ಪುತ್ತಿಲ ಪರಿವಾರದಿಂದ ಅನ್ನಪೂರ್ಣ ಎಸ್.ಕೆ. ರಾವ್ ಕಣದಲ್ಲಿದ್ದಾರೆ. ವಾರ್ಡ್ ೧೧ರ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ರೈ ನೆಲ್ಲಿಕಟ್ಟೆ, ಕಾಂಗ್ರೆಸ್‌ನಿಂದ ದಾಮೋದರ ಭಂಡಾರ್ಕರ್ ನೆಲ್ಲಿಕಟ್ಟೆ ಹಾಗೂ ಪುತ್ತಿಲ ಪರಿವಾರ ಬೆಂಬಲಿತರಾಗಿ ಚಿಂತನ್ ಪಿ. ಅಂದ್ರಟ್ಟ ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ನಡುವೆ ತ್ರಿಕೋನ ಸ್ಪರ್ಧೆಯ ಪೈಪೋಟಿ ಏರ್ಪಟ್ಟಿದೆ. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಹಾಗೂ ನಗರ ಸಭಾ ಎಜಿನಿಯರ್ ಶಬರೀನಾಥ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

Share this article