ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಆದಿವಾಸಿ ಕುರಿಗಾಹಿಯೊಬ್ಬನ ಮೇಲೆ ಹುಲಿ ದಾಳಿ ನಡೆಸಿ ಕೊಂದು, ಆತನ ದೇಹದ ಬಹುಭಾಗ ತಿಂದು ಹಾಕಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.ನ.24 ರಂದು ಹೆಡಿಯಾಲ ವಲಯದ ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ತಂದೊಡ್ಡಿದೆ.
ಬಂಡೀಪುರ ಕಾಡಂಚಿನ ಮಂಗಲ ಬಳಿಯ ಆಡಿನ ಕಣಿವೆಯ ನಿವಾಸಿ ಜೇನುಕುರುಬ ಜನಾಂಗದ ಬಸವ (54) ಮೃತ ವ್ಯಕ್ತಿ. ಬಸವ ಕುರಿ ಮೇಯಿಸಲು ಕಾಡಿಗೆ ತೆರಳಿದ್ದಾಗ ಘಟನೆ ನಡೆದಿದ್ದು, ಆತ ಮನೆಗೆ ವಾಪಸ್ ಬಾರದೆ ಆತಂಕಗೊಂಡ ಸಂಬಂಧಿಕರು ಮಂಗಳವಾರ ಬೆಳಿಗ್ಗೆ ಆಡಿನ ಕಣಿವೆ ಸುತ್ತಮುತ್ತ ಹುಡುಕಾಡುತ್ತಿದ್ದಾಗ ವೀರೇಶ್ವರ ಗುಡ್ಡ ದಲ್ಲಿ ಮೃತನ ಅರ್ಧಂಬರ್ಧ ತಿಂದುಳಿದ ಶವ ಸಿಕ್ಕಿದೆ.ಈ ವಿಷಯ ತಿಳಿದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ಸಬ್ ಇನ್‌ಸ್ಪೆಕ್ಟರ್ ಸಾಹೇಬ ಗೌಡ ಆರ್.ಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
5ನೇ ಬಲಿ: ನ.24 ರಂದು ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ, ಸೆ.4 ರಂದು ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ಬಾಲಕ ಚರಣ್, ಅ.2 ರಂದು ಹುಣಸೂರು ತಾಲೂಕಿನ ಉಡವೇಪುರದ ರೈತ ಗಣೇಶ್, ನ.6 ರಂದು ಸರಗೂರು ತಾಲೂಕಿನ ಕಾಡಬೇಗೂರು ಗ್ರಾಮದ ಬಾಲಾಜಿ ನಾಯಕ್ ಸೇರಿ ಈವರೆಗೆ ಐವರು ಪ್ರಾಣ ಕಳೆದು ಕೊಂಡಿದ್ದಾರೆ. ಹೀಗೆ ಈ ಅರಣ್ಯ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಿನಿಂದ ಮಾನವ-ಪ್ರಾಣಿ ಸಂಘರ್ಷ ಹೆಚ್ಚಿದ್ದು, ಈ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ.೧೨ಜಿಪಿಟಿ೩
೧೨ಜಿಪಿಟಿ೪೧೨ಜಿಪಿಟ೫