ಯಲ್ಲಾಪುರ: ಬುಡಕಟ್ಟು ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಜಗತ್ತಿನ ಸವಾಲುಗಳನ್ನು ಎದುರಿಸುವ ಶಿಕ್ಷಣ ನೀಡಬೇಕಾದ ಅವಶ್ಯಕತೆಯಿದೆ ಎಂದು ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೊರ್ಸಗದ್ದೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಹಲವಾರು ವರ್ಷಗಳಿಂದ ರೋಟರಿ ಬೆಂಗಳೂರು ಹೈಗ್ರೌಂಡ್ಸ್ ಸಂಸ್ಥೆಯು ಯಲ್ಲಾಪುರ, ಉಮ್ಮಚಗಿ, ಮಂಚೀಕೇರಿ ಭಾಗದ ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯಗಳಿಗಾಗಿ ಶಿಕ್ಷಣ, ಸ್ವಯಂ ಉದ್ಯೋಗ, ಮನೆಗಳಿಗೆ ಸೋಲಾರ್ ವಿದ್ಯುತ್ ಪರಿಕರಗಳ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಭಾಗದ ವಿದ್ಯಾರ್ಥಿಗಳ ಶಿಕ್ಷಣದ ಬಲವರ್ಧನೆಗೆ ವಿಶೇಷ ಒತ್ತು ನೀಡುತ್ತಿದೆ ಎಂದರು.
ಶಿರಸಿ ರೋಟರಿ ಕ್ಲಬ್ ಕಾರ್ಯದರ್ಶಿ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಮುಖ್ಯ ಹಣಕಾಸು ಹಾಗೂ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ ಮಾತನಾಡಿ, ಸ್ಕೊಡ್‌ವೆಸ್ ಸಂಸ್ಥೆಯ ೯ ಕಾರ್ಯಕ್ರಮಗಳಲ್ಲಿ ಶಿಕ್ಷಣವೂ ಒಂದಾಗಿದ್ದು, ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಅವಶ್ಯಕತೆ ಮತ್ತು ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.ಶಿರನಾಳ, ಬಿಳಕಿ, ಕೆರೆಹೊಸಳ್ಳಿ, ಇಳೇಹಳ್ಳಿ ಹಾಗೂ ಮಂಚೀಕೇರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರು ಉಪಸ್ಥಿತರಿದ್ದರು. ಯಲ್ಲಾಪುರ ತಾಲೂಕಿನ ಉಮ್ಮಚಗಿ, ಮಂಚಿಕೇರಿ, ಹಾಸಣಗಿ ಸುತ್ತಮುತ್ತಲಿನ ನೂರಕ್ಕಿಂತ ಹೆಚ್ಚಿನ ಬುಡಕಟ್ಟು ಹಾಗೂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ಛತ್ರಿ ಹಾಗೂ ಶಾಲಾ ಪರಿಕರಗಳನ್ನು ವಿತರಿಸಲಾಯಿತು.
ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಯೋಜನಾಧಿಕಾರಿ ಪ್ರಶಾಂತ ನಾಯಕ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದರು.