ಕನ್ನಡಪ್ರಭ ವಾರ್ತೆ ಮೈಸೂರು
ಹಿಂದಿನಿಂದಲೂ ತಮ್ಮ ಕಲೆ, ಆಚರಣೆಯನ್ನು ಉಳಿಸಿಕೊಂಡು ಬಂದಿರುವರ ಗಿರಿಜನರು ಮೂಲ ಸಂಸ್ಕೃತಿಯನ್ನು ಇಂದಿಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.ನಗರ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗಿರಿಜನ ಉಪ ಯೋಜನೆಯಡಿ ಶನಿವಾರ ಆಯೋಜಿಸಿದ್ದ ಗಿರಿಜನ ಉತ್ಸವ- 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಾಂಸ್ಕೃತಿಕ ಕಲೆಗಳನ್ನು, ಮೂಲ ಸಂಸ್ಕೃತಿಯನ್ನು ನಾವು ಕಾಪಾಡಿಕೊಂಡು ಹೋಗಬೇಕು. ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಸ್ಕೃತಿ ಆಚರಣೆಗಳು ಇದ್ದವು. ಅಂದಿನ ಕಲೆಗಳು ನಶಿಸಿ ಹೋಗಿದೆ. ಅದರಲ್ಲಿ ಅಪರೂಪವಾಗಿ ಕಂಡುಬರುವ ಕಲೆಗಳಲ್ಲಿ ಗಿರಿಜನರ ಕಲೆಗಳು ಅತ್ಯಂತ ಹಳೆಯ ಕಲೆಗಳಾಗಿವೆ ಎಂದರು.
ಸಣ್ಣ ಸಣ್ಣ ಸಮುದಾಯಗಳಲ್ಲಿ ಇವರು ಮೂಲ ಕಲೆಯನ್ನು ಗುರುತಿಸಿ, ನಾಶವಾಗದಂತೆ ಅವುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ಮೂಡಿ ಬಂದಿರುವ ಉತ್ಸವಗಳೇ ಜನಪರ, ಬುಡಕಟ್ಟು ಉತ್ಸವ ಹಾಗೂ ಗಿರಿಜನ ಉತ್ಸವಗಳಾಗಿವೆ. ಗಿರಿಜನರು ತಮ್ಮ ಮೂಲವಾಸದಿಂದಲೂ ಆಚರಿಸಿಕೊಂಡು ಬಂದಿರುವ ವಿವಿಧ ಕಲಾಶೈಲಿಗಳನ್ನು ತಲೆಮಾರಿನಿಂದ ತಲೆಮಾರಿನವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಆ ರೀತಿಯ ಕಲೆಗಳನ್ನು ಗುರುತಿಸಿ ಅವುಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಮುಖ್ಯ ವಾಹಿನಿಗೆ ತರುವ ಕಾರ್ಯಕ್ರಮಗಳನ್ನು ಸರ್ಕಾರ ಮತ್ತು ಇಲಾಖೆಯಿಂದ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಕ ಡಾ.ಎಂ.ಡಿ. ಸುದರ್ಶನ್ ಮಾತನಾಡಿ ಪ್ರಮುಖವಾಗಿ ಈ ಕಾರ್ಯಕ್ರಮವು ಗಿರಿಜನರ ಕಲೆಗಳ ಪ್ರದರ್ಶನಕ್ಕೆ ಆಯೋಜಿಸಲಾಗಿದೆ. ಎಲ್ಲಾ ಕಲಾವಿದರು ಪರಿಶಿಷ್ಟ ಪಂಡಗಕ್ಕೆ ಸೇರಿದ್ದು, ಈ ಕಾರ್ಯಕ್ರಮದಡಿ ಗಿರಿಜನರ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಶಾಸಕ ಕೆ. ಹರೀಶ್ ಗೌಡ ಚಾಲನೆ ನೀಡಿದರು.ಸಾಂಸ್ಕೃತಿಕ ಉತ್ಸವ:
ನಂತರ ವೇದಿಕೆ ಕಾರ್ಯಕ್ರಮದಲ್ಲಿ ದೊಡ್ಡ ಮಾರನಹಳ್ಳಿಯ ಡಿ.ಕೆ. ಲೋಕೇಶ್ ಮತ್ತು ತಂಡದಿಂದ ಸುಗಮ ಸಂಗೀತ, ಎಚ್.ಡಿ. ಕೋಟೆಯ ಜವರ ನಾಯಕ ತಂಡದಿಂದ ಜಾನಪದ ಗೀತೆ, ರಾಜೇಶ್ವರಿ ಮತ್ತು ತಂಡದಿಂದ ಭಕ್ತಿ ಸಂಗೀತ, ನಂಜನಗೂಡು ಕಳಲೆ ಗ್ರಾಮದ ಪಿ. ದೇವಣ್ಣ ಮತ್ತು ತಂಡದಿಂದ ತತ್ವಪದ, ರಮ್ಯಾ ಮತ್ತು ತಂಡದವರಿಂದ ಡೊಳ್ಳು ಕುಣಿತ ಗಮನ ಸೆಳೆಯಿತು.ಎಚ್.ಡಿ.ಕೋಟೆಯ ಚಲ್ಲನ್ ಮತ್ತು ತಂಡದಿಂದ ಬೆಟ್ಟ ಕುರುಬ ಸಾಂಪ್ರದಾಯಿಕ ನೃತ್ಯ, ನಾಣಚ್ಚಿಗದ್ದೆ ಹಾಡಿಯ ರಮೇಶ್ ಮತ್ತು ತಂಡದಿಂದ ಅಡಲೇಮರ ನೃತ್ಯ, ತಲಕಾಡಿನ ರಾಜಶೇಖರ್ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ ನೃತ್ಯ, ನಂಜನಗೂಡು ಕಳಲೆ ಗ್ರಾಮದ ಆರ್. ಪ್ರತಾಪ್ ಮತ್ತು ತಂಡದಿಂದ ಕೊಂಬು ಕಹಳೆ, ಎಚ್.ಡಿ. ಕೋಟೆಯ ಪೆಂಜಳ್ಳಿ ಕಾಲೋನಿಯ ರಮೇಶ್ ಮತ್ತು ತಂಡದಿಂದ ಕರಡಿ ಕುಣಿತ, ಯಲ್ಲಾಪುರದ ಲಿಲ್ಲಿ ಮತ್ತು ತಂಡದ ವತಿಯಿಂದ ಡಮಾಮಿ ನೃತ್ಯ ಪ್ರದರ್ಶನ ಜರುಗಿತು.