ಅಂಬೇಡ್ಕರ್ ವೃತ್ತದಲ್ಲಿ ದ್ವಾರಕೀಶ್ ಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಅಗಲಿದ ಹಾಸ್ಯ ನಟ ದ್ವಾರಕೀಶ್ ಚಿತ್ರರಂಗದಲ್ಲಿ ಸೋಲು, ಗೆಲವು ಕಂಡರೂ ಅವರು ಸೋಲನ್ನು ಒಪ್ಪಿಕೊಳ್ಳದೆ ಸೋಲನ್ನೇ ಗೆಲುವಿನ ಮೆಟ್ಟಲಾಗಿಸಿಕೊಂಡು ಜಯಶೀಲರಾಗುತ್ತಿದ್ದರು ಎಂದು ಸಿನಿಮಾ ರಂಗದ ಸಹ ನಿರ್ದೇಶಕ ಸತೀಶ್ ಆಚಾರ್ ತಿಳಿಸಿದರು.
ಬುಧವಾರ ಸಂಜೆ ವಾಟರ್ ಟ್ಯಾಂಕ್ ಸರ್ಕಲ್ ನಲ್ಲಿ ಅಭಿನವ ಪ್ರತಿಭಾ ವೇದಿಕೆ ಆಶ್ರಯದಲ್ಲಿ ಅಗಲಿದ ನಟ ದ್ವಾರಕೀಶ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಿ.ರಾಜೇಂದ್ರ ಬಾಬು ನಿರ್ದೇಶನದ ಯಾರೇ ನೀ ಅಭಿಮಾನಿ ಚಿತ್ರದಲ್ಲಿ ನಾನು ಸಹನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅದರಲ್ಲಿ ದ್ವಾರಕೀಶ್ ಪೋಷಕ ಪಾತ್ರ ವಹಿಸಿದ್ದರು.1965 ರ ಹೊತ್ತಿಗೆ ಸಿನಿಮಾ ರಂಗಕ್ಕೆ ಬಂದಿದ್ದ ದ್ವಾರಕೀಶ್ 300 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದರು.50 ಸಿನಿಮಾಗಳನ್ನು ನಿರ್ಮಿಸಿದ್ದರು. 20 ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು. ಅವರು ಸಿನಿಮಾ ರಂಗಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಪರಭಾಷೆಯ ಯಶಸ್ವಿ ಚಿತ್ರಗಳನ್ನು ಕನ್ನಡ ಚಿತ್ರಕ್ಕೆ ತಂದು ಯಶಸ್ಸು ಕಂಡಿದ್ದರು ಎಂದರು.
ಕಲಾವಿದ ಪುರುಶೋತ್ತಮ್ ಮಾತನಾಡಿ, ಆಗಿನ ಕಾಲದಲ್ಲೇ ದ್ವಾರಕೀಶ್ ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದರು. ಅವರ ಮಕ್ಕಳು ದ್ವಾರಕೀಶ್ ಬ್ಯಾನರ್ ಅಡಿ ಇನ್ನಷ್ಟು ಉತ್ತಮ ಚಿತ್ರ ನೀಡಲಿ ಎಂದರು.