ಹೋರಾಟಗಾರ್ತಿ ಶಿವಮ್ಮ ಸಾಲಿ ನಿಧನಕ್ಕೆ ಶ್ರದ್ಧಾಂಜಲಿ

KannadaprabhaNewsNetwork | Published : Jun 24, 2024 1:38 AM

ಸಾರಾಂಶ

ಹಾಸನದಲ್ಲಿ ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಜನಾಂಗದ ದಿಟ್ಟ ಮಹಿಳೆ, ಹೋರಾಟಗಾರ್ತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶಿವಮ್ಮ ಸಾಲಿ ಅವರ ಅಕಾಲಿಕ ಮರಣದ ಅಂಗವಾಗಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನುಡಿನಮನ । ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದಿಂದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಜನಾಂಗದ ದಿಟ್ಟ ಮಹಿಳೆ, ಹೋರಾಟಗಾರ್ತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶಿವಮ್ಮ ಸಾಲಿ ಅವರ ಅಕಾಲಿಕ ಮರಣದ ಅಂಗವಾಗಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿವಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನ ಆಚರಿಸುವುದರ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ ಗೌರವ ಸೂಚಿಸಲಾಯಿತು.

ನಂತರ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಮಾತನಾಡಿ, ‘ಗೌರವ ಎಂಬುದು ಕೇಳಿ ಪಡೆಯುವುದಲ್ಲ, ತಾನಾಗಿ ಬರಬೇಕು. ನಾನು ಕಳೆದ ೪೦ ವರ್ಷಗಳ ಕಾಲ ಈ ಕುಲದ ಸಂಘಟನೆಯಲ್ಲಿ ಇದ್ದೇನೆ. ೮೦ರ ದಶಕದಲ್ಲಿ ನಮ್ಮನ್ನು ಕಾಣುತ್ತಿದ್ದ ರೀತಿ ನೋಡಿದ್ದೇನೆ. ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದಿಂದ ಮೊಟ್ಟ ಮೊದಲ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಮೂರ್‍ನಾಲ್ಕು ಅಜೆಂಡವನ್ನು ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಮುಖವಾಗಿ ನಮ್ಮ ಜನಾಂಗದ ದಿಟ್ಟ ಮಹಿಳೆ ಹೋರಾಟಗಾರ್ತಿ, ರಾಷ್ಟ್ರ ಪ್ರಶಸ್ತಿ ಪುರಸ್ಕರತ ಶಿವಮ್ಮ ಸಾಲಿ ಅವರ ಅಕಾಲಿಕ ಮರಣ ಸಂಭವಿಸಿದ್ದು, ಈ ನಿಟ್ಟಿನಲ್ಲಿ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಗುತ್ತಿದೆ. ನಮ್ಮ ಜನಾಂಗಕ್ಕೆ ಅವರು ಆದರ್ಶ ಮಹಿಳೆ. ಅವರ ಈ ಮರಣ ನಮ್ಮ ಜನಾಂಗಕ್ಕೆ ನಷ್ಟವಾಗಿದೆ. ಈ ಕಾರ್ಯಕ್ರಮಕ್ಕೆ ಮೃತರ ಪತಿ ಎನ್.ಡಿ.ಸಾಲಿ ಅವರು ಕೂಡ ಆಗಮಿಸಿದ್ದಾರೆ. ನಮ್ಮ ಸಂಘದ ಗೌರವ ಅಧ್ಯಕ್ಷರಾದ ಬಸವರಾಜು, ರಾಜು, ರಂಗಸ್ವಾಮಿ ಸೇರಿದಂತೆ ಅನೇಕರು ಆಗಮಿಸಿದ್ದು, ಈ ವೇಳೆ ಸಂಘದ ಕಾರ್ಯಚಟುವಟಿಕೆ ಬಗ್ಗೆ ಚರ್ಚೆ ಮಾಡಲಾಗುವುದು. ಸಕ್ರಿಯ ಕಾರ್ಯಕರ್ತರಾದ ಮಲ್ಲೇಶಪ್ಪ ಅವರು ನಿವೃತ್ತರಾಗಿದ್ದು, ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Share this article