ಕನ್ನಡಪ್ರಭ ವಾರ್ತೆ, ತುಮಕೂರುಮಾಜಿ ಮಂತ್ರಿ ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ಶ್ರೀ ವೀರಣ್ಣ ಅಭಿಮಾನಿ ಬಳಗ-ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ 30 ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಶಿಕ್ಷಕರಾಗಿ, ವಕೀಲರಾಗಿ, ವಿಧಾನಪರಿಷತ್ ಸದಸ್ಯರಾಗಿ, ವಿಧಾನಸಭಾ ಸದಸ್ಯರಾಗಿ ನಾಡಿಗೆ ಮತ್ತು ವಾಲ್ಮೀಕಿ ಸಮುದಾಯಕ್ಕೆ ವೀರಣ್ಣ ಅವರು ಸಲ್ಲಿಸಿರುವ ಸೇವೆ ಗಣನೀಯ.1985-89ರವರೆಗೆ ಕೊರಟಗೆರೆ ವಿಧಾನಸಭೆಯ ಸದಸ್ಯರಾಗಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಸಣ್ಣ ಉಳಿತಾಯ, ಸಾರಿಗೆ, ತೋಟಗಾರಿಕೆ ಸೇರಿದಂತೆ ಏಕ ಕಾಲಕ್ಕೆ ಏಳು ಖಾತೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಲದೆ ವಾಲ್ಮೀಕಿ ಸಮುದಾಯಕ್ಕೆ ಎಸ್ಟಿ ಕ್ಯಾಟಗರಿ ಸ್ಟೇಟಸ್ ನೀಡಲು ಸರ್ಕಾರಗಳು ಮೀನಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕವಾಗಿ ಇದ್ದ ಗೊಂದಲ ಬಗೆಹರಿಸಿ, ಸಮುದಾಯಕ್ಕೆ ಶೇ ೩ರಷ್ಟು ಮೀಸಲಾತಿ ಒದಗಿಸಿಕೊಡುವಲ್ಲಿ ವೀರಣ್ಣ ಅವರ ಪಾತ್ರ ಮಹತ್ವದ್ದು, ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಭಾಪತಿ ರಮೇಶ್‌ಕುಮಾರ್, ಶಾಸಕರಾದ ಕೆ.ಎನ.ರಾಜಣ್ಣ, ಟಿ.ಬಿ.ಜಯಚಂದ್ರ, ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಂಸದ ಜಿ.ಎಸ್.ಬಸವರಾಜು, ಸಾಹಿತಿ ಬರಗೂರು ರಾಮಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ವೀರಣ್ಣ ಅವರ ಹಿತೈಷಿಗಳು, ಅಭಿಮಾನಿಗಳು ಭಾಗವಹಿಸುವಂತೆ ವಿ.ಎಸ್ ಉಗ್ರಪ್ಪ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ,ಕಾರ್ಯಾಧ್ಯಕ್ಷ ನರಸಿಂಹಯ್ಯ, ಹನುಮಂತರಾಯಪ್ಪ, ಖಜಾಂಚಿ ರಾಜಪ್ಪ, ಶ್ರೀರಾಮುಲು, ಮುಖಂಡರಾದ ರಾಜಣ್ಣ, ಓಬಳರಾಜು,ಮಹಾಲಿಂಗಪ್ಪ, ಗರುಡಯ್ಯ, ಶೀತಲ್, ಕೃಷ್ಣೇಗೌಡ, ಎಡಿ ಬಲರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.