ಧಾರವಾಡ:
ಸಾಧನಕೇರಿಯ ಚೈತ್ರದ ಸಭಾಭವನದಲ್ಲಿ ಶುಕ್ರವಾರ ಧಾರವಾಡ ಸಾಹಿತ್ಯಿಕ ಸಂಘಟನೆಯ ಅನ್ವೇಷಣಕೂಟವೂ ದಿ. ಡಾ. ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.ಈ ವೇಳೆ ಮಾತನಾಡಿದ ಸಾಹಿತಿಗಳು, ತತ್ವಶಾಸ್ತ್ರ ಮತ್ತು ಮನಃಶ್ಶಾಸ್ತ್ರದ ಶ್ರೇಷ್ಠ ಅಧ್ಯಾಪಕರಾಗಿ, ವಿನಯಶೀಲ ವ್ಯಕ್ತಿಯಾಗಿ, ನೇರ ನಡೆ-ನುಡಿಗಳೊಂದಿಗಿನ ಧೀಮಂತ ವ್ಯಕ್ತಿಯಾಗಿ ಹಲವಾರು ಕೃತಿ ರಚಿಸಿ ಸಹಸ್ರಾರು ಓದುಗ ಬಳಗಕ್ಕೆ ನೀಡಿದ ಅಪೂರ್ವ ವ್ಯಕ್ತಿ ಎಸ್.ಎಲ್. ಭೈರಪ್ಪ. ಅವರ ಜ್ಞಾನರಾಶಿಗೆ ಸೂಕ್ತವಾಗಿ ಸಲ್ಲಬೇಕಿದ್ದ ನೊಬೆಲ್ ಪ್ರಶಸ್ತಿಯಿರಲಿ, ಈ ಹಿಂದೆಯೇ ಸಿಗಬೇಕಿದ್ದ ಜ್ಞಾನಪೀಠ ಪುರಸ್ಕಾರದಿಂದಲೂ ವಂಚಿತರಾಗಿದ್ದು ಕನ್ನಡಿಗರ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಬರವಣಿಗೆಯ ವಸ್ತುವನ್ನು ಮೊದಲೇ ನಿಷ್ಕರ್ಶ ಮಾಡಿಯೇ ಮುಂದಿನ ಅಡಿ ಇಡುತ್ತಿದ್ದ, ಸತ್ಯವನ್ನು ನಿರ್ಭಯದಿಂದ ಬಿಚ್ಚಿಡುತ್ತಿದ್ದ, ಕಟುವಾಸ್ತವಗಳನ್ನು ಸಮರ್ಥವಾಗಿ ತೆರೆದಿಡುತ್ತಿದ್ದ ಭೈರಪ್ಪನವರ ಆ ಶೈಲಿಯೇ ಅದೊಂದು ಕನ್ನಡ ಸಾಹಿತ್ಯಕ್ಕೆ ಅಪೂರ್ವವಾದ ಕೊಡುಗೆ ಎನ್ನಬಹುದಾಗಿದೆ ಎಂದರು.ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಡಾ. ಎಸ್.ಎಲ್. ಭೈರಪ್ಪ ಮತ್ತು ಖ್ಯಾತ ಸಿತಾರ ವಾದಕ ಶ್ರೀನಿವಾಸ ಜೋಶಿ ನಿಧನಕ್ಕೆ ಶ್ರದ್ಧಾಂಜಲಿ ಗೊತ್ತುವಳಿ ಮಂಡಿಸಿದರು. ಎರಡು ನಿಮಿಷಗಳ ಮೌನಾಚರಣೆ ಸಲ್ಲಿಸಲಾಯಿತು.
ಈ ವೇಳೆ ಹಿರಿಯ ಸಾಹಿತಿಗಳಾದ ಪ್ರೊ. ದುಷ್ಯಂತ ನಾಡಗೌಡ, ಡಾ. ಹ.ವೆಂ. ಕಾಖಂಡಿಕಿ, ಹರ್ಷ ಡಂಬಳ, ಶ್ರೀನಿವಾಸ ವಾಡಪ್ಪಿ, ಡಾ. ಕೃಷ್ಣ ಕಟ್ಟಿ, ಮನೋಜ ಪಾಟೀಲ, ಪ್ರಹ್ಲಾದ ಯಾವಗಲ್ಲ, ವೆಂಕಟೇಶ ದೇಸಾಯಿ, ಡಾ. ಅರವಿಂದ ಯಾಳಗಿ, ಡಾ. ಮಂದಾಕಿನಿ ಪುರೋಹಿತ, ಎಸ್.ಎಂ. ದೇಶಪಾಂಡೆ, ಪರಮೇಶ್ವರ ಎಂ.ಎಸ್. ಶ್ರೀಧರ ಗಾಂವಕರ, ರಮೇಶ ಇಟ್ನಾಳ, ಅನಂತ ಸಿದ್ಧೇಶ್ವರ, ಶ್ರೀನಿವಾಸ ಹುದ್ದಾರ, ಬಿ.ಜಿ. ಗುಂಡೂರ, ರಮೇಶ ನಾಡಿಗೇರ, ಸೀಮಾ ಪರಾಂಜಪೆ, ಪದ್ಮಾ ಪುರೋಹಿತ ಮುಂತಾದವರು ಉಪಸ್ಥಿತರಿದ್ದರು.