ಭಾವಪೂರ್ಣ ಶ್ರದ್ಧಾಂಜಲಿ । ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಭೆ । ಗೌರವ ಅರ್ಪಣೆ । ಮೌನಾಚರಿಸಿ ಶಾಂತಿ ಕೋರಿಕೆ
ಕನ್ನಡಪ್ರಭ ವಾರ್ತೆ ಹಾಸನಸರಳ ವ್ಯಕ್ತಿತ್ವ, ಸ್ನೇಹಜೀವಿಯಾಗಿದ್ದ ಹಿರಿಯ ಪತ್ರಕರ್ತ ಹಾಗೂ ಹಾಸನವಾಣಿ ದಿನಪತ್ರಿಕೆ ಸಂಪಾದಕ ಎ.ಬಿ.ಮುರುಳಿ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.
ನಗರದ ಜಿಲ್ಲಾ ಪತ್ರಕರ್ತ ಸಂಘದಲ್ಲಿ ಮಂಗಳವಾರ ಬೆಳಿಗ್ಗೆ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್. ವೇಣುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಶ್ರದ್ಶಾಂಜಲಿ ಸಭೆಯಲ್ಲಿ ಮೊದಲು ಎರಡು ನಿಮಿಷ ಮೌನ ಆಚರಿಸಿ ಶಾಂತಿ ಕೋರಲಾಯಿತು. ನಂತರ ಮುರುಳಿ ಬಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಲಾಯಿತು.ಕೆ.ಎಚ್.ವೇಣುಕುಮಾರ್ ಮಾತನಾಡಿ, ‘ಸರಳ ಮತ್ತು ಸ್ನೇಹ ಜೀವಿಯಾಗಿದ್ದ ಎ.ಬಿ.ಮುರುಳಿ ಸದಾ ಕಾಲ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಜೀವ ಇಂದು ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ಕಳೆದ ೧೦ ವರ್ಷಗಳ ಹಿಂದೆ ಯಾವುದೇ ಕ್ರೈಂ ನಡೆದರೆ ಮೊದಲು ಮುರುಳಿಗೆ ತಿಳಿಯುತ್ತಿತ್ತು. ಹೆಚ್ಚು ಕ್ರಿಯಾಶೀಲವಾದ ವ್ಯಕ್ತಿ. ನಟರಾಜ ಜತೆ ಮುರುಳಿ ಹೆಚ್ಚು ಇರುತ್ತಿದ್ದು, ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಅನೇಕರ ಜೊತೆ ನಿರಂತರವಾದ ಸ್ನೇಹ ಇಟ್ಟುಕೊಂಡಿದ್ದು, ಯಾರ ವಿರುದ್ಧ ಯಾವತ್ತು ಮಾತನಾಡಲಿಲ್ಲ’ ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ಮಾತನಾಡಿ, ಮುರುಳಿ ಸಾವನಪ್ಪಿರುವುದು ಬಹಳ ದುಃಖ ವಿಚಾರ. ವಿಶೇಷ ವ್ಯಕ್ತಿತ್ವ ಹೊಂದಿದ್ದರು. ಪೋನ್ ಯಾವಾಗ ಮಾಡಿದರೂ ಉತ್ತರ ಕೊಡುತ್ತಿದ್ದರು. ಕೊಂಡಿ ಕಳಚಿಕೊಂಡಿದೆ. ಹೃದಯವಂತ ಸ್ನೇಹ ಜೀವಿಯಾಗಿದ್ದು, ಎಲ್ಲಾ ಕಾರ್ಯಕ್ರಮಕ್ಕೂ ಬರುತ್ತಿದ್ದರು. ಸಾವಿನ ವಿಚಾರ ಕೇಳಿ ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಕ್ಕಿ, ಕುಟುಂಬಕ್ಕೆ ಧೈರ್ಯ ತುಂಬುವ ಶಕ್ತಿ ದೇವರು ನೀಡಲಿ ಎಂದರು.ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಸರಳ ಜೀವಿ ಮುರುಳಿ ಅವರು ಪತ್ರಿಕಾ ರಂಗದಲ್ಲಿ ಮೊದಲು ಪೋಟೋಗ್ರಫಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಯಾರಿಗೆ ಏನೆ ಸಮಸ್ಯೆ ಇದ್ದರೂ ರಾತ್ರಿ ವೇಳೆ ಕರೆದರೆ ಓಡಿ ಬರುತ್ತಿದ್ದರು. ಈ ಹಿಂದೆ ಹೃದಯಘಾತವಾಗಿ ಉಳಿದುಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಕೋರಿದರು.
ಶಾಂತಿ ಸಭೆ ನಂತರ ಮಧ್ಯಾಹ್ನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮುರುಳಿಯ ಮೃತ ದೇಹವನ್ನು ತುರ್ತು ವಾಹನದಲ್ಲಿ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಉದಯಕುಮಾರ್, ಎಚ್.ಬಿ. ಮದನ್ ಗೌಡ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಅತೀಖುರ್ ರೆಹಮಾನ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಮಂಜು, ಪಿಟಿಐ ಶಿವರಾಮ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಆರ್. ಮಂಜುನಾಥ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಖಜಾಂಚಿ ಜಿ. ಪ್ರಕಾಶ್, ಹಿರಿಯ ಪತ್ರಕರ್ತ ನಾಗರಾಜು ಹೆತ್ತೂರ್, ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಬಾಳ್ಳುಗೋಪಾಲ್, ಜಿಲ್ಲಾ ವರದಿಗಾರ ಪ್ರಕಾಶ್ ಬೆಳವಾಡಿ, ಸಂಪಾದಕ ಜಗದೀಶ್ ಚೌಡಹಳ್ಳಿ, ಸಂಪಾದಕ ತೌಫಿಕ್, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಮೋಹನ್, ನಟರಾಜು, ಕುಮಾರ್, ಇತರ ಪತ್ರಕರ್ತರು ಭಾಗವಹಿಸಿದ್ದರು.