ಕನ್ನಡಪ್ರಭ ವಾರ್ತೆ ಮೈಸೂರುಜಂಗಮ ಸ್ವರೂಪಿಯಾದ ಎಸ್.ಎಂ. ಕೃಷ್ಣ ಅವರ ಸಾಧನೆಗಳು ಪ್ರಾತಃ ಸ್ಮರಣೀಯ ಆಗಿರುತ್ತವೆ ಎಂದು ಮಾಜಿ ಸಭಾಪತಿ ಬಿ.ಎಲ್. ಶಂಕರ್ ಹೇಳಿದರು.ಮೈಸೂರು ನಗರ ಮತ್ತು ಜಿಲ್ಲಾ ನಾಗರಿಕ ಸಮಿತಿ, ಮಂಡ್ಯ ಜಿಲ್ಲಾ ಬಳಗವು ಶನಿವಾರ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಎಸ್. ಚನ್ನಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್. ಕೃಷ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.ಸಿನಿಮಾ ಕ್ಷೇತ್ರದಲ್ಲಿ ಹೇಗೆ ರಾಜಕುಮಾರ್ ಒಬ್ಬರೇ ಎನ್ನುತ್ತಾರೆಯೋ ಹಾಗೆಯೇ ರಾಜಕೀಯ ಕ್ಷೇತ್ರದಲ್ಲಿ ಎಸ್.ಎಂ. ಕೃಷ್ಣ ಅವರು ಮತ್ತೊಬ್ಬ ರಾಜಕಾರಣಿ ಬರಲು ಸಾಧ್ಯವಿಲ್ಲ. ದುಬಾರಿ ಬಟ್ಟೆ ವಿಷಯದಲ್ಲಿ ಅವರು ಎಂದಿಗೂ ರಾಜೀ ಆಗುತ್ತಿರಲಿಲ್ಲ. 1984 ರಲ್ಲಿ ಸಂಸದರಾಗಿ ಆಯ್ಕೆ ಆಗಿದ್ದರೆ ರಾಷ್ಟ್ರಮಟ್ಟದಲ್ಲಿ ಉನ್ನತ ಪದವಿಗೆ ಏರುತ್ತಿದ್ದರು. ಆದರೆ ಮಂಡ್ಯ ಜನ ಅದಕ್ಕೆ ಅವಕಾಶ ನೀಡಲಿಲ್ಲ. ಮಂಡ್ಯದ ಶೈಲಿಯೇ ಹಾಗೆ. ಗೆಲ್ಲಿಸುವ ಸಂದರ್ಭದಲ್ಲಿ ಸೋಲಿಸುತ್ತಾರೆ. ಸೋತು ರಾಜಕೀಯ ನಿವೃತ್ತಿ ಆಗುತ್ತಾರೆ ಎನ್ನುವ ಸಂದರ್ಭದಲ್ಲಿ ಗೆಲ್ಲಿಸುತ್ತಾರೆ ಎಂದು ಅವರು ಹಾಸ್ಯವಾಗಿ ಹೇಳಿದರು.ಬಹಳಷ್ಟು ಸಂದರ್ಭದಲ್ಲಿ ಪದ ಬಳಕೆ ಸರಿ ಇಲ್ಲದಿದ್ದಾಗ ಅದಕ್ಕೆ ಕ್ಷಮೆ ಕೇಳುತ್ತಿದ್ದರು. ಯಾವ ಕಲ್ಮಶವೂ ಅವರಿಗೆ ಇರುತ್ತಿರಲಿಲ್ಲ. ಯಾವುದೇ ಪದವಿಗಳನ್ನು ಅವರು ಹುಡುಕಿಕೊಂಡು ಹೋಗಿರಲಿಲ್ಲ. ಎಲ್ಲವೂ ಅವರನ್ನು ಬಯಸಿ ಬಂದಿದ್ದು, ಮಧ್ಯಾಹ್ನ ಬಿಸಿಯೂಟ ಜಾರಿಗೊಳಿಸಿದರು. ಶಿಕ್ಷಣ ಮತ್ತು ಆರೋಗ್ಯ ತುಂಬಾ ದುಬಾರಿಯಾಗಿದ್ದ ವೇಳೆ ಅವರು, ಯಶಸ್ವಿನಿ ಯೋಜನೆ ತಂದಿದ್ದಾಗಿ ಅವರು ತಿಳಿಸಿದರು.1962 ಇಸವಿಯಲ್ಲಿ ದೇವೇಗೌಡರು ಮತ್ತು ಎಸ್.ಎಂ. ಕೃಷ್ಣ ಇಬ್ಬರೂ ಒಟ್ಟಿಗೆ ರಾಜಕಾರಣಕ್ಕೆ ಬಂದರು. ಒಬ್ಬರು ಮಾಸ್, ಮತ್ತೊಬ್ಬರು ಕ್ಲಾಸ್. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂಬ ಮಾತಿನಲ್ಲಿ ನನಗೆ ನಂಬಿಕೆ. ಹೀಗಾಗಿ ಜಂಗಮ ಸ್ವರೂಪಿಯಾದ ಕೃಷ್ಣ ಅವರ ಸಾಧನೆಗಳು ಪಾತ್ರಃ ಸ್ಮರಣೀಯ ಆಗಿರುತ್ತವೆ ಎಂದರು.ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಮಾತನಾಡಿ, ಎಸ್.ಎಂ. ಕೃಷ್ಣ ಜಾತಿ ರಾಜಕಾರಣ ಮಾಡಿದವರಲ್ಲ. ಸಚಿವ ಸಂಪುಟದಲ್ಲಿ ಸಚಿವನಾಗುವೆ ಎಂಬ ಕನಸು ಕಂಡಿರಲಿಲ್ಲ. ಆದರೆ, ಮಹತ್ವದ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿದ್ದನ್ನು ನನ್ನ ಜೀವನದಲ್ಲಿ ನಾನು ಮರೆಯಲಾಗದು ಎಂದರು.ಪ.ಜಾತಿಯವನಿಗೆ ಹಣಕಾಸು ಸಚಿವ ಸ್ಥಾನ ನೀಡಿದರು. ಇದನ್ನು ಮರೆಯಲು ಸಾಧ್ಯವಿಲ್ಲ. ಅಂತಹ ಮುಖ್ಯಮಂತ್ರಿ ಬರಲು ಸಾಧ್ಯವಿಲ್ಲ. ನನಗೆ ಬಂಪರ್ ಮೇಲೆ ಬಂಪರ್ ಕೊಟ್ಟರು. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಿದರು. . 30 ಸಾವಿರ ಕೋಟಿ ರೂ. ಬಜೆಟ್ ನಲ್ಲಿ ಮೂಲಸೌಲಭ್ಯ, ಸ್ತ್ರೀ ಸಬಲೀಕರಣ, ಸರ್ವ ಜನಾಂಗದ ಏಳಿಗೆಗೆ ಯೋಜನೆ ನೀಡಿದ್ದಾಗಿ ಅವರು ಹೇಳಿದರು.ಎಂದಿಗೂ ಭ್ರಷ್ಟಾಚಾರದ ರಾಜಕಾರಣ ಮಾಡಲಿಲ್ಲ. ಮಹಾಭಾರತದಲ್ಲಿ ಕೃಷ್ಣ ಮಾಡಿದ ಚಾಕಚಾಕತೆಯನ್ನು ಕಲಿಯುಗದಲ್ಲಿ ಎಸ್.ಎಂ. ಕೃಷ್ಣ ಮಾಡಿದರು. ಅವರು ಉಪ ರಾಷ್ಟ್ರಪತಿ ಆಗಿದ್ದರೆ ರಾಜಕೀಯ ಜೀವನ ಪೂರ್ಣವಾಗುತ್ತಿತ್ತು. ಬೆಂಗಳೂರಿನಲ್ಲಿ ಒಂದು ಬಡಾವಣೆಗೆ ಎಸ್.ಎಂ. ಕೃಷ್ಣ ಮತ್ತು ಚಾಮರಾಜ ಕ್ಷೇತ್ರದ ವ್ಯಾಪ್ತಿಯ ಹಳೆಯ ವರ್ತುಲ ರಸ್ತೆಗೆ ಒಂದು ರಸ್ತೆಗೆ ಕೃಷ್ಣ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಚ್.ಎಂ. ರಾಜಶೇಖರ್ ಮಾತನಾಡಿ, ಕೌಟುಂಬಿಕ ಹಿನ್ನೆಲೆ, ಪ್ರಾಥಮಿಕ ಶಿಕ್ಷಣ, ಆಮೆರಿಕಾದಲ್ಲಿ ವ್ಯಾಸಂಗ ಮಾಡಿದ ಅವರು ಚಿಕ್ಕ ವಯಸ್ಸಿನಲ್ಲಿಯೇ ಮೌಲ್ಯಗಳನ್ನು ರೂಢಿಸಿಕೊಂಡವರು. ದೂರ ದೃಷ್ಟಿ, ಜನರ ಸೇವೆ, ನೀತಿ ನಿಯಮಗಳ ಮೂಲಕ ರಾಜ್ಯದ ಅಭಿವೃದ್ಧಿ ಮಾಡಿದ್ದಾರೆ ಎಂದರು.ದೇವರಾಜು ಅರಸು ಬಲವಂತವಾಗಿ ಕೃಷ್ಣ ಅವರನ್ನು ತಮ್ಮ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದರು. ದಕ್ಷವಾಗಿ ಕಾರ್ಯನಿರ್ವಹಿಸಿ ಜನಮುಖಿಯಾದರು. ಅತ್ಯುನ್ನತ ರಾಜಕೀಯ ಗುಣವನ್ನು ಪಡೆದಿದ್ದರು. ಮುಖ್ಯಮಂತ್ರಿಯಾಗಿ ಹೊಸ ನಿಯಮ, ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಗ್ರ್ಯಾಂಡ್ ಬೆಂಗಳೂರಿಗೆ ತಳಪಾಯ ಹಾಕಿದರು. ಇಂದು ಬೆಂಗಳೂರು ವಿಶ್ವದಲ್ಲಿ ಸಿಲಿಕಾನ್ ಸಿಟಿಯಾಗಿ ಗುರುತಿಸಿಕೊಳ್ಳಲು ಎಸ್.ಎಂ. ಕೃಷ್ಣ ಕಾರಣ ಎಂದರು.ಒಬ್ಬ ಮನುಷ್ಯನಿಗೆ ಸಿಕ್ಕ ಅವಕಾಶ ಬಳಸಿಕೊಂಡು ಪ್ರಜೆಗಳಿಗೆ ಉತ್ತಮ ಆಡಳಿತ ನೀಡಬಲ್ಲ ವಿಶೇಷ ಆಡಳಿತವನ್ನು ಕೃಷ್ಣ ನಡೆಸಿದರು. ಅಧಿಕಾರದಿಂದ ಇಳಿದ ಮೇಳೆ ಸೋನಿಯಾ ಗಾಂಧಿ ಅವರು ಇವರನ್ನು ಮಹಾರಾಷ್ಟ್ರಕ್ಕೆ ರಾಜ್ಯಪಾಲರನ್ನಾಗಿ ಮಾಡಿದರು. ರಾಜ್ಯದ ಮೊದಲ ವಿದೇಶಾಂಗ ಸಚಿವರಾದರು. ಕರ್ನಾಟಕ ರತ್ನ ಕೊಡಬೇಕು. ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ಎಸ್.ಎಂ. ಕೃಷ್ಣ ಹೆಸರಿಡಬೇಕು. ಅವರ ಹೆಸರು ಅಮರವಾಗಿರಲಿ ಎಂದು ಅವರು ಆಶಿಸಿದರು.ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಈಗ ರಾಜಕೀಯವನ್ನು ಸಂಯಮದಿಂದ ಮಾಡುವುದು ಕಷ್ಟ. ಆದರೆ ಸುಧೀರ್ಘವಾಗಿ ಸಂಯಮದಿಂದ ರಾಜಕೀಯ ಮಾಡಿದವರು ಎಸ್.ಎಂ. ಕೃಷ್ಣ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಕಾರ್ಯದರ್ಶಿ ಎಚ್.ಬಿ. ದಿನೇಶ್, ಮೈಸೂರು ವಿವಿ ಪ್ರಸಾರಾಂಗದ ಮಾಜಿ ನಿರ್ದೇಶಕ ಕೆ.ಟಿ. ವೀರಪ್ಪ, ಜಯರಾಂ ಕೀಲಾರ, ಮಾಜಿ ಶಾಸಕ ಸಂದೇಶ್ ನಾಗರಾಜ್, ಶಾಸಕ ಕೆ. ಹರೀಶ್ ಗೌಡ, ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಪ್ರೊ. ಕೆ. ಕಾಳಚನ್ನೇಗೌಡ ಪ್ರೊ.ಚಂದ್ರಶೇಖರ ಗೌಡ, ಡಾ.ಈ.ಸಿ. ನಿಂಗರಾಜ್ ಗೌಡ, ಸುರೇಶ್ ಗೌಡ, ಸತೀಶ್, ಎಚ್. ಅರವಿಂದ್, ಜಿ. ಪ್ರಕಾಶ್, ಎ.ಸಿ. ಲಕ್ಷ್ಮಣ್, ಎಚ್.ಎಂ. ಗೌಡಪ್ಪ, ಕೆ.ಎಸ್. ಕೃಷ್ಣ, ಬಿ.ಪಿ. ಸುರೇಶ್, ಜೆ.ಬಿ. ರಂಗಸ್ವಾಮಿ ಸೇರಿದಂತೆ ನೂರಾರು ಗಣ್ಯರು ಪಾಲ್ಗೊಂಡಿದ್ದರು.