ಗದಗ: ಜಿಲ್ಲೆಯ ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಶನಿವಾರ 14ನೇ ದಿನಕ್ಕೆ ಕಾಲಿಟ್ಟಿದ್ದು, ಉತ್ಖನನ ನಿರ್ದೇಶಕ ಟಿ.ಎನ್. ಕೇಶವ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಉತ್ಖನನ ಮುಂದುವರಿಸಲಾಯಿತು.
ಹಂಪಿಯಲ್ಲಿ ಸತತ 20 ವರ್ಷಗಳ ಕಾಲ ಸಂಶೋಧನೆ ನಡೆಸಿ, ವಿಠ್ಠಲ ದೇವಸ್ಥಾನದ ರಹಸ್ಯಗಳನ್ನು ಬಿಚ್ಚಿಟ್ಟಿದ್ದರು. ರವಿವರ್ಮ ಶಾಸನದಲ್ಲಿ ಉಲ್ಲೇಖಿತವಾದ ಪುರಾತನ ಹೊಂಡಗಳನ್ನು ಪತ್ತೆಹಚ್ಚಿದ ಸಾಹಸಿ, ಅಜಂತಾ ಮತ್ತು ಎಲ್ಲೋರಾದಂತಹ ವಿಶ್ವ ಪ್ರಸಿದ್ಧ ತಾಣಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಕ್ಕುಂಡಿ ಉತ್ಖನನದ ಆರಂಭಿಕ ಹಂತದಲ್ಲಿ ಅಮೂಲ್ಯ ಸಲಹೆಗಳನ್ನು ಟಿ.ಎನ್. ಕೇಶವ್ ನೀಡಿದ್ದರು ಎಂದು ಹಿರಿಯರು ಸ್ಮರಿಸಿದರು.
ಪಾಲಕರ ಆಕ್ರೋಶ
ಕೋಟೆ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ಮಕ್ಕಳು ಕಳೆದ 14 ದಿನಗಳಿಂದ ನಡೆಯುತ್ತಿರುವ ಉತ್ಖನನದಿಂದ ಉಂಟಾಗುತ್ತಿರುವ ಧೂಳಿನಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಗೋಡೆಗಳ ತೆರವಿಗೆ ಚಿಂತನೆಅಧಿಕಾರಿಗಳು ಉತ್ಖನನ ನಡೆಯುತ್ತಿರುವ ಸ್ಥಳದಲ್ಲಿ ಮಧ್ಯೆ ಇರುವ ಗೋಡೆಗಳನ್ನು ತೆರವಿಗೆ ಚಿಂತನೆ ನಡೆಸಿದ್ದು, ಅದಕ್ಕೆ ಬೇಕಾಗುವ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಗೋಡೆ ತೆರವು ಮಾಡುವ ನಿಟ್ಟಿನಲ್ಲಿ ವಿವಿಧ ಕೆಲಸಗಳು ನಡೆದಿದ್ದು, ಶನಿವಾರ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ.