ಕೂಡ್ಲಿಗಿ: ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಸೂರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ನನಗೆ ಜೀವ ಕೊಟ್ಟಿರುವುದು ಒಂದು ಸಮುದಾಯ, ಉತ್ಸವಕ್ಕೆ ಜಾಗ ಕೊಟ್ಟಿದ್ದು ಮತ್ತೊಂದು ಸಮುದಾಯ, ಇನ್ನೊಂದು ಸಮುದಾಯದ ಓಬವ್ವಳ ಉತ್ಸವ ಆಚರಿಸುತ್ತಿರುವುದು ನಮ್ಮ ಕ್ಷೇತ್ರದ ಹಿರಿಮೆಯಾಗಿದೆ. ಗುಡೇಕೋಟೆ ಒನಕೆ ಓಬವ್ವ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಹಾಗೂ ಸಂಸದ ಇ.ತುಕಾರಾಮ್ ಅವರು ಹೆಚ್ಚಿನ ಸಹಕಾರ ದೊರೆತಿದೆ ಎಂದು ತಿಳಿಸಿದರಲ್ಲದೆ, ಕಲಾವಿದರ ತವರೂರಾದ ಗುಡೇಕೋಟೆ ಒನಕೆ ಓಬವ್ವ ಉತ್ಸವದಲ್ಲಿ ಮುಂದಿನ ವರ್ಷದಲ್ಲಿ ಮತ್ತಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು. ಒನಕೆ ಓಬವ್ವ ಉತ್ಸವವು ನಮ್ಮ ಉತ್ಸವವಲ್ಲ, ಇದು ಜನರ ಉತ್ಸವ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಸಿದ್ದಯ್ಯನಕೋಟೆ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾತನಾಡಿ, ಕಲೆ, ಸಾಹಿತ್ಯ ಸಂಸ್ಕೃತಿಯ ಅನಾವರಣಕ್ಕೆ ಒನಕೆ ಓಬವ್ವ ಉತ್ಸವ ಸಾಕ್ಷಿಯಾಗಿದ್ದು, ಬುದ್ಧ, ಬಸವ, ಅಂಬೇಡ್ಕರ್ ಅವರು ಶಿಕ್ಷಣ, ಅರಿವು ತುಂಬಿದ್ದಾರೆ. ಅದರಂತೆ ಕೂಡ್ಲಿಗಿ ಶಾಸಕರು ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಸೇರಿ ನಾನಾ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ತಿಳಿಸಿದರು.ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಮಾತನಾಡಿದರು. ತಹಸೀಲ್ದಾರ್ ವಿ.ಕೆ.ನೇತ್ರಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ, ಮುಖಂಡರಾದ ಎನ್.ಟಿ.ತಮ್ಮಣ್ಣ, ಒನಕೆ ಓಬವ್ವ ವಂಶಸ್ಥ ರಾಜಣ್ಣ, ಶಿವಪ್ರಸಾದ್ ಗೌಡ, ರಾಘವೇಂದ್ರ ರಾವ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿಲಾನ್ ಮಹಮ್ಮದ್, ಜರಿಮಲೆ ಸಿದ್ದಪ್ಪ ದೊರೆ, ಗುಡೇಕೋಟೆ ಶಿವರಾಜ ವರ್ಮ ದೊರೆ, ತಾಪಂ ಇಒ ನರಸಪ್ಪ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸೇರಿ ಇತರರಿದ್ದರು.
ಹೆತ್ತ ತಾಯಿ, ಹೊತ್ತ ಮಣ್ಣಿನ ಋಣ ತೀರಿಸಿದ ರೂವಾರಿ: ಗುಡೇಕೋಟೆಯಲ್ಲಿ ನಡೆದ ಒನಕೆ ಓಬವ್ವ ಉತ್ಸವದಲ್ಲಿ ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪಟ್ಟಾಧ್ಯಕ್ಷ ಪ್ರಶಾಂತಸಾಗರ ಶಿವಾಚಾರ್ಯರು ಮಾತನಾಡಿ, ಹೆತ್ತ ತಾಯಿಗೂ, ಹೊತ್ತ ಮಣ್ಣಿಗೂ ಋಣ ತೀರಿಸುವಂತೆ ಒನಕೆ ಓಬವ್ವ ಉತ್ಸವ ಆಚರಿಸುವ ಮೂಲಕ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ರೂವಾರಿಯಾಗಿದ್ದಾರೆ. ಕಹಳೆ ಊದುವಂಥ ಛಲವಾದಿ ಸಮುದಾಯದ ಹೆಣ್ಣು ಒನಕೆ ಓಬವ್ವ ಅವರು ಚಿತ್ರದುರ್ಗದ ಕೋಟೆ ರಕ್ಷಿಸಿದ ಶೌರ್ಯ, ಸಾಹಸವು ಆಕೆಯ ತವರೂರು ಗುಡೇಕೋಟೆಗೆ ಹೆಮ್ಮೆಯ ಸಂಗತಿ ಎಂದರು.