ಮೂಲ್ಕಿ ತಾಲೂಕಿನ ಗ್ರಂಥಪಾಲಕರಿಗೆ, ಪುಸ್ತಕಪ್ರಿಯರಿಗೆ ಸಂಮಾನ

KannadaprabhaNewsNetwork | Published : Feb 12, 2025 12:30 AM

ಸಾರಾಂಶ

ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹೊತ್ತಗೆಯ ಹೊತ್ತು: ಪುಸ್ತಕ ಮನೆಯ ಕಷ್ಟಸುಖ’ ಗೋಷ್ಠಿಯಲ್ಲಿ ಟಾಟಾ ಟ್ರಸ್ಟ್ ಕ್ಷೇತ್ರ ವ್ಯವಸ್ಥಾಪಕ ಡಾ. ಪ್ರಕಾಶ್ ಕಾಮತ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಓದಿನಿಂದ ನಮಗೆ ಸಂಸ್ಕೃತಿ, ಜ್ಞಾನ ಸಿಗುತ್ತದೆ ಎಂದು ಬೆಂಗಳೂರಿನ ಟಾಟಾ ಟ್ರಸ್ಟ್ ಕ್ಷೇತ್ರ ವ್ಯವಸ್ಥಾಪಕ ಡಾ. ಪ್ರಕಾಶ್ ಕಾಮತ್ ಏಳಿಂಜೆ ಹೇಳಿದ್ದಾರೆ.

ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹೊತ್ತಗೆಯ ಹೊತ್ತು: ಪುಸ್ತಕ ಮನೆಯ ಕಷ್ಟಸುಖ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಷ್ಠಿಯಲ್ಲಿ ಓದಿಸುವುದು ಹೇಗೆ ಎಂಬುದು ಪ್ರಶ್ನೆ. ಗ್ರಂಥಾಲಯ ಕಲಿಕಾ ಕ್ಷೇತ್ರ. ಅಲ್ಲಿ ಓದುವ ಕುತೂಹಲ ಮೂಡಿಸುವ ಕೆಲಸ ಆಗಬೇಕು. ಹಲವಾರು ಚಟುವಟಿಕೆಗಳಾಗಬೇಕು. ಓದಿನ ಸುಖಕ್ಕಾಗಿ ಗ್ರಂಥಾಲಯಗಳ ಕೊಡುಗೆ ದೊಡ್ಡದು. ಪಂಚಾಯಿತಿ ಗ್ರಂಥಾಲಯದ ಹೆಸರು ಅರಿವು. ಜ್ಞಾನ ಹರಿಯುತ್ತಿರಬೇಕು ಸ್ಥಳೀಯ ಸಾಹಿತಿಗಳ ಕೃತಿಗಳೂ ಸಿಗುವಂತಾಗಬೇಕು ಎಂದರು.

ಗ್ರಂಥಪಾಲಕರು ಹಾಗೂ ಓದುಗರು ಗ್ರಂಥಾಲಯಗಳ ಕಷ್ಟ ಸುಖಗಳ ಬಗ್ಗೆ ಮಾತನಾಡಿದರು.

ಹೇಮಲತಾ ಶರ್ಮ ಮಾತನಾಡಿ, ಆರನೆಯ ವಯಸ್ಸಿನ ಮಕ್ಕಳಿನಿಂದಲೇ ಓದುವ ಅವಕಾಶ ಅರಿವು ಕೇಂದ್ರದಿಂದ ಆರಂಭವಾಗಿದೆ. ಮಕ್ಕಳ ಸ್ನೇಹಿ ಗ್ರಂಥಾಲಯವನ್ನಾಗಿಸಲು ಡಿಜಿಟಲ್ ಅಳವಡಿಕೆ, ಬಸ್ ನಿಲ್ದಾಣದಲ್ಲಿ ಪುಸ್ತಕ ಗೂಡು ಹೀಗೆ ಪುಸ್ತಕ ಪ್ರೀತಿಗೆ ಸಾಕಷ್ಟು ಅವಕಾಶಗಳ ಪ್ರಯತ್ನ ನಡೆದಿದೆ ಎಂದರು.

ಓದುಗ ರವೀಶ್ ಕಾಮತ್ ಮಾತನಾಡಿ, ತಲೆ ಬಗ್ಗಿಸಿ ಪುಸ್ತಕ ಓದಿದವರು ತಲೆ ಎತ್ತಿ ನಡೆಯುತ್ತಾರೆ ಎನ್ನುವುದಕ್ಕೆ ನನ್ನಂತಹವನೇ ಸಾಕ್ಷಿ. ಯುವ ಸಮೂಹ ಪುಸ್ತಕಗಳನ್ನು ಕರ್ತವ್ಯ, ಅಭಿಮಾನದಿಂದ ಓದುವುದನ್ನು ಮರೆತಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ಅನೇಕ ಸಾಹಿತಿಗಳ ಕೃತಿಗಳು, ಪತ್ರಿಕೆಗಳನ್ನು ಓದಿದ್ದೇನೆ ಎಂದರು.

ಲಿಡಿಯಾ ನಜರತ್, ನಂದಾ ಪಾಯಸ್, ರಮಣಿ, ವಿನುತಾ ಅತ್ತೂರು, ಸರೋಜಿನಿ ಮೆನ್ನಬೆಟ್ಟು ಮೊದಲಾದವರು ಗ್ರಂಥಾಲಯಗಳ ಜೊತೆಗಿನ ತಮ್ಮ ಒಡನಾಟ ಹಂಚಿಕೊಂಡರು.

ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಹಾಗೂ ನಗರ ಪಂಚಾಯತ್‌ಗಳ ಗ್ರಂಥಪಾಲಕರು, ಪ್ರತಿ ಪಂಚಾಯತ್‌ನ ತಲಾ ಇಬ್ಬರು ಅತ್ಯುತ್ತಮ ಓದುಗರು ಹೀಗೆ 30 ಮಂದಿಯನ್ನು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಗೌರವಿಸಿದರು.

ಈ ಸಂದರ್ಭ ಪುನರೂರು ಮಾತನಾಡಿ, ನಾನು 50 ವರುಷಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಬಿಡುಗಡೆಗೊಳಿಸಿರಬಹುದು. ಸಾವಿರಾರು ಪುಸ್ತಕಗಳನ್ನು ಹಂಚಿದ್ದೇನೆ. ಇನ್ನೂ ಕೊಡಲು ಸಿದ್ಧನಿದ್ದೇನೆ. ಆಸಕ್ತಿ ಇರುವ ಶಾಲೆಗಳಿಗೆ ಹಂಚಲು ಸಿದ್ದನಿದ್ದೇನೆ ಎಂದು ಹೇಳಿದರು.

ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ವಂ. ಜೊಕಿಂ ಫರ್ನಾಂಡಿಸ್, ಕಟೀಲು ಪದವಿ ಕಾಲೇಜು ಗ್ರಂಥಪಾಲಕಿ ಸುಮಿತ್ರಾ ಪಕ್ಷಿಕೆರೆ, ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್. ಇದ್ದರು. ಶ್ರೀಶ ಸರಾಫ್ ಐಕಳ ನಿರೂಪಿಸಿದರು.

Share this article