ಕಳಪೆ ಗುಣಮಟ್ಟದ ಸ್ಕೂಟರ್‌ ಮಾರಿದ ಟ್ರೈಯೋ ಗ್ರುಪ್ಸ್‌ಗೆ ದಂಡ

KannadaprabhaNewsNetwork |  
Published : Jun 27, 2025, 12:48 AM IST
ಆದೇಶ. | Kannada Prabha

ಸಾರಾಂಶ

ಕಳಪೆ ಗುಣಮಟ್ಟದ ಇಲೆಕ್ಟ್ರಿಕ್‌ ಸ್ಕೂಟರ್‌ ಮಾರಾಟ ಮಾಡಿದ ಟ್ರೈಯೋ ಗ್ರುಪ್ಸ್‌ನ ಪ್ಯುವರ್‌ ಎನರ್ಜಿ ಪ್ರೈ.ಲಿ.ಗೆ ಜಿಲ್ಲಾ ಗ್ರಾಹಕರ ಆಯೋಗ ವಾಹನ ಸರಿಪಡಿಸಬೇಕು ಇಲ್ಲವೇ ದಂಡ ಸಹಿತ ವಾಹನದ ಮೊತ್ತವನ್ನು ದೂರುದಾರರಿಗೆ ಮರಳಿಸುವಂತೆ ಆದೇಶಿಸಿದೆ.

ಧಾರವಾಡ: ಕಳಪೆ ಗುಣಮಟ್ಟದ ಇಲೆಕ್ಟ್ರಿಕ್‌ ಸ್ಕೂಟರ್‌ ಮಾರಾಟ ಮಾಡಿದ ಟ್ರೈಯೋ ಗ್ರುಪ್ಸ್‌ನ ಪ್ಯುವರ್‌ ಎನರ್ಜಿ ಪ್ರೈ.ಲಿ.ಗೆ ಜಿಲ್ಲಾ ಗ್ರಾಹಕರ ಆಯೋಗ ವಾಹನ ಸರಿಪಡಿಸಬೇಕು ಇಲ್ಲವೇ ದಂಡ ಸಹಿತ ವಾಹನದ ಮೊತ್ತವನ್ನು ದೂರುದಾರರಿಗೆ ಮರಳಿಸುವಂತೆ ಆದೇಶಿಸಿದೆ.

ಹುಬ್ಬಳ್ಳಿಯ ರಾಕೇಶ ಮೆಣಸಿಣಕಾಯಿ ಎನ್ನುವವರು 2022ರಲ್ಲಿ ₹98 ಸಾವಿರ ಹಣ ಪಾವತಿಸಿ ಇಲೆಕ್ಟ್ರಿಕ್ ಸ್ಕೂಟರನ್ನು ಖರೀದಿಸಿದ್ದರು. ವಾಹನವು ಬ್ಯಾಟರಿಯ ಮೇಲೆ 5 ವರ್ಷದ ವಾರಂಟಿ ಹೊಂದಿತ್ತು. ಸ್ಕೂಟರ್‌ ಬಳಸಿದ ಕೆಲ ದಿನಗಳ ನಂತರ ಒಮ್ಮಿಂದೊಮ್ಮೆಲೆ ರಸ್ತೆಯ ಮಧ್ಯೆ ನಿಲ್ಲಲು ಪ್ರಾರಂಭಿಸಿತು. ಜತೆಗೆ ಕಂಪನಿ ಹೇಳಿದ ಮೈಲೇಜ್‌ ಸಹ ನೀಡುತ್ತಿರಲಿಲ್ಲ. ಈ ವಿಷಯವನ್ನು ತಾವು ಖರೀದಿಸಿದ ಮಳಿಗೆ(ಶೋರೂಂ)ಯವರಿಗೆ ತಿಳಿಸಿದರೂ ಸಹ ಸರಿಪಡಿಸಿ ಕೊಟ್ಟಿರಲಿಲ್ಲ. ಕೆಲ ದಿನಗಳ ಬಳಿಕ ತಮ್ಮ ಮಳಿಗೆಯನ್ನು ಬಂದ್‌ ಮಾಡಿದ್ದಾರೆ. ಇದರಿಂದಾಗಿ ರಾಕೇಶ್‌ ಅವರಿಗೆ ಸ್ಕೂಟರ್‌ ದುರಸ್ತಿ ಮಾಡಿಸಲು ತೊಂದರೆಯಾಗಿದೆ. ಈ ಕುರಿತು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಸೇವಾ ನ್ಯೂನ್ಯತೆಯ ಅಡಿ ಕಳೆದ ವರ್ಷ ಸೆಪ್ಟಂಬರ್‌ 20ರಂದು ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು, ಈ ಎಲ್ಲ ಸಂಗತಿಗಳನ್ನು ಆಧರಿಸಿ ಸೇವಾ ನ್ಯೂನ್ಯತೆ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಪ್ಯೂವರ್‌ಎನರ್ಜಿ ಟ್ರೆಯೋ ಗ್ರೂಪ್ಸ್ ಕಂಪನಿಗೆ ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರ ವಾಹನಕ್ಕೆ ಹೊಸ ಬ್ಯಾಟರಿಯನ್ನು ಅಳವಡಿಸಿ ಕೊಡಬೇಕು. ಒಂದು ವೇಳೆ ಅದನ್ನು ಸರಿಪಡಿಸಿ ಕೊಡದೇ ಇದ್ದರೆ ದೂರುದಾರರು ಪಾವತಿ ಮಾಡಿದ ಹಣವನ್ನು ಬಡ್ಡಿಯೊಂದಿಗೆ ಮರಳಿಸಬೇಕು. ಜತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ₹50 ಸಾವಿರ ಪರಿಹಾರ ಮತ್ತು ₹10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಟ್ರೈಯೋ ಗ್ರೂಪ್‌ನ ಪ್ಯೂವರ್ ಎನರ್ಜಿ ಪ್ರೆ.ಲಿ. ಗೆ ಆದೇಶಿಸಿದೆ.

PREV

Recommended Stories

ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌
ರಾಜ್ಯಾದ್ಯಂತ ಏಕರೂಪದ ಹಾಲು ದರ ಖರೀದಿ ನಿಗದಿಗಾಗಿ ಒತ್ತಾಯ