ಕನ್ನಡಪ್ರಭ ವಾರ್ತೆ ತುಮಕೂರು
ಶ್ರೀಕ್ಷೇತ್ರದಲ್ಲಿ ನಡೆದ ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಎಂ.ಬಿ. ಪಾಟೀಲ್, ಈಶ್ವರ್‌ಖಂಡ್ರೆ, ಸಂಸದ ಜಿ.ಎಸ್. ಬಸವರಾಜು ಸೇರಿದಂತೆ ವಿವಿಧ ಮಠಾಧೀಶರು, ಹರಗುರುಚರಮೂರ್ತಿಗಳು ಹಾಗೂ ಸಹಸ್ರಾರು ಭಕ್ತ ಸಮೂಹ ಸಾಕ್ಷಿಯಾದರು.
ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ನಸುಕಿನಿಂದಲೇ ವಿವಿಧ ಧಾರ್ಮಿಕ ವಿಧಿ, ವಿಧಾನಗಳು, ವೇದ ಘೋಷಗಳು ಮೊಳಗಿದವು.ಶ್ರೀಗಳ ೫ನೇ ಪುಣ್ಯಾರಾಧನೆ ಪ್ರಯುಕ್ತ ಶ್ರೀಗಳು ಐಕ್ಯರಾಗಿರುವ ಶಿವಯೋಗಿ ಮಂದಿರ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದು, ಶ್ರೀಗಳ ಗದ್ದುಗೆಯನ್ನು ವಿವಿಧ ಪುಷ್ಪ, ಹಣ್ಣು ಹಂಪಲುಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.
ಮೆರವಣಿಗೆ:
ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆಯು ಶ್ರೀಗಳ ಗದ್ದುಗೆ ಮಂದಿರದಿಂದ ಆರಂಭವಾಗಿ ವಸ್ತುಪ್ರದರ್ಶನದ ಆವರಣದವರೆಗೆ ಸಾಗಿತು. ಮತ್ತೆ ವಸ್ತು ಪ್ರದರ್ಶನದ ಆವರಣದಿಂದ ಗದ್ದುಗೆಯ ಮಂದಿರದವರೆಗೆ ಮೆರವಣಿಗೆಯು ಸಾಗಿ ಅಂತ್ಯಗೊಂಡಿತು. ಈ ಮೆರವಣಿಗೆಯುದ್ದಕ್ಕೂ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹರಗುರುಚರಮೂರ್ತಿಗಳು, ಭಕ್ತಾದಿಗಳು, ಶಾಲಾ ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಗದ್ದುಗೆ ದರ್ಶನ ಪಡೆದ ಸಿಎಂ:
ಶ್ರೀಗಳ ಗದ್ದುಗೆ ದರ್ಶನ ಪಡೆದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರನ್ನು ಪೂರ್ಣಕುಂಭ ಕಳಸ ಮತ್ತು ಮಂಗಳವಾದ್ಯದೊಂದಿಗೆ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಭವ್ಯವಾಗಿ ನಿರ್ಮಿಸಿದ್ದ ಬೃಹತ್ ಗೋಸಲ ಸಿದ್ಧೇಶ್ವರ ವೇದಿಕೆಗೆ ಕರೆದೊಯ್ಯಲಾಯಿತು.
ರಾಜ್ಯ ಸರ್ಕಾರ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಘೋಷಿಸಿದ್ದು, ಅದರಂತೆ ಪುಣ್ಯಾರಾಧನೆಯನ್ನು ಅಕ್ಷರಶಃ ಮಹಾದಾಸೋಹ ದಿನವನ್ನಾಗಿ ಆಚರಿಸುತ್ತಿದ್ದು, ಶ್ರೀಮಠದ 6 ಕಡೆಗಳಲ್ಲಿ ಲಕ್ಷಾಂತರ ಭಕ್ತಾದಿಗಳಿಗಾಗಿ ಬಗೆ ಬಗೆಯ ಖಾದ್ಯಗಳೊಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಮುಂಜಾನೆಯಿಂದಲೇ ನಾಡಿನ ವಿವಿಧೆಡೆಯಿಂದ ಧಾವಿಸಿದ್ದ ಸಹಸ್ರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಶ್ರೀಮಠದಲ್ಲಿ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿ ವಿ. ಮರಿಯಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.----ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 5ನೇ ಪುಣ್ಯ ಸ್ಮರಣೆಯನ್ನು ಸಿದ್ದಗಂಗೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.