ಡೀಸೆಲ್‌ ಬೆಲೆ ಹೆಚ್ಚಳಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸರಕು ಸಾಗಣೆ ಲಾರಿ ಮಾಲೀಕರು : 15ರಿಂದ ಮುಷ್ಕರ

KannadaprabhaNewsNetwork | Updated : Apr 06 2025, 11:44 AM IST

ಸಾರಾಂಶ

ಡೀಸೆಲ್‌ ಬೆಲೆ ಹೆಚ್ಚಳಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸರಕು ಸಾಗಣೆ ಲಾರಿ ಮಾಲೀಕರು ದರ ಇಳಿಕೆಗೆ ಏ.14ರ ಗಡುವಿ ವಿಧಿಸಿದ್ದಾರೆ. ಅಷ್ಟರೊಳಗೆ ಡೀಸೆಲ್‌ ದರ ಇಳಿಸದಿದ್ದರೆ ಏ.15ರಿಂದ ಸರಕು ಸಾಗಣೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ.

 ಬೆಂಗಳೂರು : ಡೀಸೆಲ್‌ ಬೆಲೆ ಹೆಚ್ಚಳಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸರಕು ಸಾಗಣೆ ಲಾರಿ ಮಾಲೀಕರು ದರ ಇಳಿಕೆಗೆ ಏ.14ರ ಗಡುವಿ ವಿಧಿಸಿದ್ದಾರೆ. ಅಷ್ಟರೊಳಗೆ ಡೀಸೆಲ್‌ ದರ ಇಳಿಸದಿದ್ದರೆ ಏ.15ರಿಂದ ಸರಕು ಸಾಗಣೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ.

ರಾಜ್ಯ ಸರ್ಕಾರ ಏ.1ರಿಂದ ಡೀಸೆಲ್‌ ದರವನ್ನು 2 ರು.ನಷ್ಟು ಏರಿಕೆ ಮಾಡಿದೆ. ಡೀಸೆಲ್‌ ದರ ಇಳಿಕೆಗೆ ಆಗ್ರಹಿಸಿರುವ ಲಾರಿ ಮಾಲೀಕರು, ಶನಿವಾರ ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಈ ಹಿಂದೆಯೂ ಡೀಸೆಲ್‌ ದರ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಲಾರಿ ಮಾಲೀಕರು, ಶನಿವಾರದ ಸಭೆಯಲ್ಲೂ ರಾಜ್ಯ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ, ಡೀಸೆಲ್‌ ದರ ಇಳಿಕೆ ಸೇರಿ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಡಲಾಗಿದೆ. ಅಲ್ಲದೆ, ಏ.14ರೊಳಗೆ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದು, ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಏ.15ರ ಬೆಳಗ್ಗೆ 6 ಗಂಟೆಯಿಂದ 6 ಲಕ್ಷ ಲಾರಿಗಳು ಸರಕು ಸಾಗಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಲಾಯಿತು. ಲಾರಿ ಮಾಲೀಕರ ಸಭೆಯಲ್ಲಿ ಚರ್ಚೆ ನಡೆಸಿ 5 ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಲು ನಿರ್ಧರಿಸಲಾಯಿತು.

5 ಬೇಡಿಕೆ ಮುಂದಿಟ್ಟಿರುವ ಲಾರಿ ಮಾಲೀಕರು

ಲಾರಿ ಮಾಲೀಕರ ಸಭೆಯಲ್ಲಿ ಚರ್ಚೆ ನಡೆಸಿ 5 ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಲು ನಿರ್ಧರಿಸಲಾಯಿತು. ಪ್ರಮುಖವಾಗಿ 7 ತಿಂಗಳಿನಿಂದ ಡೀಸೆಲ್‌ ದರ 5 ರು.ನಷ್ಟು ಹೆಚ್ಚಿಸಲಾಗಿದೆ. ಅಲ್ಲದೆ, ಅವಶ್ಯಕತೆಯಿಲ್ಲದಿದ್ದರೂ ಏ.1ರಿಂದ 2 ರು. ಹೆಚ್ಚಿಸಲಾಗಿದೆ. ಇದರಿಂದ ಸರಕು ಸಾಗಣೆ ಮಾಡುವ ಲಾರಿ ಮಾಲೀಕರಿಗೆ ಸಾಕಷ್ಟು ಆರ್ಥಿಕ ಹೊರೆಯಾಗಲಿದ್ದು, ಕೂಡಲೇ ಬೆಲೆ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.

ಅದರ ಜತೆಗೆ ರಾಜ್ಯ ಹೆದ್ದಾರಿಯಲ್ಲಿ ವಿವಿಧೆಡೆ 18 ಟೋಲ್‌ ಬೂತ್‌ಗಳನ್ನು ನಿರ್ಮಿಸಿ ಟೋಲ್‌ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ರಾಜ್ಯ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಕೂಡಲೇ ಕೈಬಿಡಬೇಕು. ಬಾರ್ಡರ್‌ ಚೆಕ್‌ ಪೋಸ್ಟ್‌ಗಳನ್ನು ಕೂಡಲೇ ರದ್ದು ಮಾಡಬೇಕು, ಲಾರಿಗಳ ದೈಹಿಕ ಸಾಮರ್ಥ್ಯ ಪ್ರಮಾಣಪತ್ರ ಶುಲ್ಕ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕು ಹಾಗೂ ನಗರ ಪ್ರದೇಶದಲ್ಲಿ ಸರಕು ಸಾಗಣೆ ವಾಹನಗಳ ಪ್ರವೇಶ ನಿಷೇಧದಂಥ ಕ್ರಮ ರದ್ದು ಮಾಡಬೇಕು. ಈ ಐದು ಬೇಡಿಕೆಗಳನ್ನು ಏ. 14ರ ಮಧ್ಯರಾತ್ರಿಯೊಳಗೆ ಈಡೇರಿಸಬೇಕು ಎಂದು ಲಾರಿ ಮಾಲೀಕರು ಆಗ್ರಹಿಸಿದ್ದಾರೆ.

ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮುಷ್ಕರದ ಮಾಹಿತಿ ನೀಡಿದ ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ, ಡೀಸೆಲ್‌ ದರ ಹೆಚ್ಚಳದಿಂದ ಲಾರಿ ಮಾಲೀಕರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಹೀಗಾಗಿ ಅದನ್ನು ಕೂಡಲೇ ಹಿಂಪಡೆಯಬೇಕು. ಅದರ ಜತೆಗೆ ಇನ್ನೂ ನಾಲ್ಕು ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಬೇಡಿಕೆ ಈಡೇರಿಕೆ ಮತ್ತು ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸಲು ಏ. 14ರ ಗಡುವು ನೀಡಲಾಗಿದೆ. ಏ.15 ರಿಂದ ಎಲ್ಲ ಲಾರಿಗಳನ್ನು ಟೋಲ್ ಮತ್ತು ಹೈವೇಗಳಲ್ಲಿಯೇ ಬಿಟ್ಟು ಮುಷ್ಕರ ಆರಂಭಿಸಲಾಗುವುದು. ಮುಷ್ಕರದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ತಿಳಿಸಿದರು.

ಮುಷ್ಕರಕ್ಕೆ ಪೆಟ್ರೋಲ್, ಡೀಸೆಲ್‌ ಪೂರೈಕೆದಾರರು, ಮ್ಯಾಕ್ಸಿ ಕ್ಯಾಬ್‌, ಏರ್‌ಪೋರ್ಟ್‌ ಟ್ಯಾಕ್ಸಿ ಸೇರಿ ಇನ್ನಿತರ ವಾಹನ ಸಂಘಟನೆಗಳು ಬೆಂಬಲ ನೀಡಿವೆ. ಅದರ ಜತೆಗೆ ಮುಷ್ಕರಕ್ಕೆ ರಾಜ್ಯಾದ್ಯಂತ ಬೆಂಬಲ ಪಡೆಯಲು ಮೈಸೂರು, ಚಾಮರಾಜನಗರ, ಹುಬ್ಬಳ್ಳಿ-ಧಾರವಾಡ ಸೇರಿ ಇನ್ನಿತರ ಕಡೆ ಸಭೆ ನಡೆಸಲಾಗುವುದು ಎಂದು ವಿವರಿಸಿದರು.

Share this article