ಕನ್ನಡಪ್ರಭ ವಾರ್ತೆ ಕಲಾದಗಿ
ಬಡ ರೈತನ ಮಗಳಾದ ಗಂಗಾ ದಂಡಿನ ಚಿಕ್ಕ ವಯಸ್ಸಿನಲ್ಲೇ ಸೈಕಲ್ ತುಳಿಯುವ ಅಭ್ಯಾಸ ರೂಢಿಸಿಕೊಂಡವರು. ತಂದೆ ಪ್ರಲ್ಹಾದ್ ಹಾಗೂ ತಾಯಿ ಲಕ್ಷ್ಮೀ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೂ ತಮ್ಮ ನಾಲ್ಕು ಹೆಣ್ಣು ಮಕ್ಕಳನ್ನು ವಿದ್ಯಾಭ್ಯಾಸ ಹಾಗೂ ಕ್ರೀಡಾಸಕ್ತಿಗೆ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾರೆ. ಗಂಡು ಮಕ್ಕಳಿಲ್ಲ ಎಂಬ ಕೊರಗು ಇಟ್ಟುಕೊಳ್ಳದೇ ಹೆಣ್ಮಕ್ಕಳೇ ನಮ್ಮ ಬದುಕು ಎಂದು ಎಷ್ಟೇ ತೊಂದರೆ ಎದುರಾದರೂ ಯಾವುದಕ್ಕೂ ಕಡಿಮೆ ಆಗದಂತೆ ಬೆಳೆಸಿದ್ದಾರೆ. ನಾಲ್ಕೂ ಹೆಣ್ಮಕ್ಕಳು ಉತ್ತಮ ಶಿಕ್ಷಣ ಪಡೆದು ತಂದೆ-ತಾಯಿಗೆ ಹೆಮ್ಮೆ ತಂದಿದ್ದಾರೆ.
ಓರ್ವ ಮಗಳು ಎಇಇ, ಇನ್ನೊಬ್ಬಳು ಪೊಲೀಸ್ ಕಾನಸ್ಟೆಬಲ್, ಮೂರನೇಯವಳು ಸೈನಿಕನ ಪತ್ನಿಯಾಗಿದ್ದರೆ, ಕೊನೆಯವಳಾದ ಗಂಗಾ ಸೈಕ್ಲಿಂಗ್ ಪಟುವಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ.ರಾಷ್ಟ್ರಮಟ್ಟದಲ್ಲಿ ಬಾಗಲಕೋಟೆ ಜಿಲ್ಲೆ ಸೈಕ್ಲಿಂಗ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ತುಳಸಿಗೇರಿ ಗ್ರಾಮದ ಯುವಕ, ಯುವತಿಯರು ಮಲ್ಲಕಂಬ ಹಾಗೂ ಸೈಕ್ಲಿಂಗ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
-ಸಿದ್ದು ಪೂಜಾರಿ ಬಾಗಲಕೋಟ ನಿವಾಸಿ