ತುಳು 8ನೇ ಪರಿಚ್ಛೇದಕ್ಕೆ ಶೀಘ್ರ ಸೇರ್ಪಡೆಯಾಗಲಿ: ವೀರಪ್ಪ ಮೊಯ್ಲಿ

KannadaprabhaNewsNetwork |  
Published : Oct 05, 2025, 01:01 AM IST
‘ಲೋಕಗೆಂದಿನ ಗಾಂಧಿಯೆರ್’ ಕೃತಿ ಲೋಕಾರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ. ಉದಯ ಕುಮಾರ್ ಇರ್ವತ್ತೂರು ಬರೆದಿರುವ ‘ಲೋಕಗೆಂದಿನ ಗಾಂಧಿಯೆರ್’ ಕೃತಿಯನ್ನು ಉರ್ವಸ್ಟೋರ್‌ನ ತುಳು ಭವನದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಬಿಡುಗಡೆಗೊಳಿಸಿದರು.

ಮಂಗಳೂರಿನಲ್ಲಿ ‘ಲೋಕಗೆಂದಿನ ಗಾಂಧಿಯೆರ್’ ಕೃತಿ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಮಂಗಳೂರು

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕೇಂದ್ರ ಸರ್ಕಾರ ವರದಿ ಪಡೆದುಕೊಂಡಿತ್ತು. ಈಗಿನ ಸರ್ಕಾರ ಅದನ್ನು ಪರಿಗಣಿಸಿಲ್ಲ. ಶೀಘ್ರದಲ್ಲಿ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ. ಉದಯ ಕುಮಾರ್ ಇರ್ವತ್ತೂರು ಬರೆದಿರುವ ‘ಲೋಕಗೆಂದಿನ ಗಾಂಧಿಯೆರ್’ ಕೃತಿಯನ್ನು ಉರ್ವಸ್ಟೋರ್‌ನ ತುಳು ಭವನದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂಬ ಕನಸು ಎಲ್ಲರಿಗೂ ಇದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದೇ ಮೊದಲ ಹಾಗೂ ಕೊನೆಯ ಪ್ರಸ್ತಾವನೆಯಾಗಿದೆ ಎಂದು ಹೇಳಿದರು.

ಗಾಂಧೀಜಿ ಎಂದೂ ಬತ್ತದ ಸತ್ಯದ ಗಣಿ. ಈ ಗಣಿಯ ಪ್ರಯೋಜನವನ್ನು ಇಂದಿನ ಯುವಜನತೆ ಪಡೆಯಬೇಕು. ಸತ್ಯ, ಅಹಿಂಸೆಯ ಶಕ್ತಿಯಿಂದ ದೇಶದ ಎಲ್ಲರಿಗೂ ಸ್ವಾತಂತ್ರ್ಯ ತಂದುಕೊಟ್ಟಿರುವುದು ಗಾಂಧೀಜಿ ಎಂಬ ಧೀಮಂತ ವ್ಯಕ್ತಿತ್ವ. ಅಸ್ಪೃಶ್ಯತೆ ನಿವಾರಣೆಗೆ ಗಾಂಧೀಜಿ ಅವರಿಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಗುರುಗಳಾಗಿದ್ದರು. ಗಾಂಧೀಜಿ ಅವರ ಬಗ್ಗೆ ತುಳುವಿನಲ್ಲಿ ಅಪೂರ್ವ ಪುಸ್ತಕ ಹೊರತರಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಅಕಾಡೆಮಿ ವತಿಯಿಂದ ವಿವಿಧ ದಾರ್ಶನಿಕರಿಗೆ ಸಂಬಂಧಿಸಿದ ಪುಸ್ತಕಗಳನ್ನು ತುಳುವಿನಲ್ಲಿ ಪ್ರಕಟಿಸಲಾಗುತ್ತಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ತುಳು ಎರಡನೇ ಅಧಿಕೃತ ಭಾಷೆಯಾಗಿ ಜಾರಿಯಾಗಲಿದೆ ಎಂದರು.

ಕೃತಿಕಾರ ಡಾ. ಉದಯ ಕುಮಾರ್ ಇರ್ವತ್ತೂರು ಮಾತನಾಡಿದರು. ಮಹಾತ್ಮ ಗಾಂಧಿ ವಿಚಾರ ವೇದಿಕೆ ಕಾರ್ಯದರ್ಶಿ ಡಾ.ಎನ್. ಇಸ್ಮಾಯಿಲ್, ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಸುಳ್ಯದ ಗಾಂಧಿ ಚಿಂತನಾ ವೇದಿಕೆ ಸಂಚಾಲಕ ಹರೀಶ್ ಬಂಟ್ವಾಳ, ದ.ಕ. ಜಿಲ್ಲಾ ಗಾಂಧಿ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ. ಸುಂದರ ಬೆಳುವಾಯಿ ಅತಿಥಿಗಳಾಗಿದ್ದರು.

ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಸಂಚಾಲಕ ಕುಂಬ್ರ ದುರ್ಗಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಉದ್ಯಾವರ ನಾಗೇಶ್, ಬೂಬ ಪೂಜಾರಿ, ಸಂತೋಷ್ ಶೆಟ್ಟಿ ಹಿರಿಯಡ್ಕ, ಬಾಬು ಪಾಂಗಾಳ ಇದ್ದರು. ಇದಕ್ಕೂ ಮುನ್ನ ‘ತುಳುವ ನೆಲದಲ್ಲಿ ಲೋಕಮಾನ್ಯರು’ ಎಂಬ ವಿಷಯವಾಗಿ ವಿಚಾರಗೋಷ್ಠಿ ಹಾಗೂ ಸಂವಾದ ನಡೆಯಿತು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’