ತುಳುನಾಡ ಗದ್ದೆಗಳಲ್ಲಿ ಉತ್ತರ ಕರ್ನಾಟಕ ಭಕ್ತಿ ಗೀತೆಗಳ ಸೊಗಡು!

KannadaprabhaNewsNetwork |  
Published : Jul 17, 2026, 02:45 AM IST
ಸೊಗಸು | Kannada Prabha

ಸಾರಾಂಶ

ಒಂದು ಕಾಲದಲ್ಲಿ ತುಳುನಾಡಿನ ಗದ್ದೆಗಳಲ್ಲಿ ನಾಟಿ ವೇಳೆ ಪಾರ್ದನ, ಜಾನಪದ ಹಾಡುಗಳು ಮತ್ತು ರೈತರ ಶ್ರಮಗೀತೆ ಮೊಳಗುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಸ್ಥಳೀಯ ಕೃಷಿ ಕಾರ್ಮಿಕರ ಕೊರತೆಯಿಂದ ಉತ್ತರ ಕರ್ನಾಟಕದ ಗಂಗಾವತಿ ಭಾಗದ ನಾಟಿ ತಂಡಗಳು ಕರಾವಳಿಗೆ ಆಗಮಿಸುತ್ತಿದ್ದು, ಅವರೊಂದಿಗೆ ಉತ್ತರ ಕರ್ನಾಟಕದ ಭಕ್ತಿ ಗೀತೆಗಳೂ ತುಳುನಾಡಿನ ಗದ್ದೆಗಳಲ್ಲಿ ಪ್ರತಿಧ್ವನಿಸುತ್ತಿವೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಒಂದು ಕಾಲದಲ್ಲಿ ತುಳುನಾಡಿನ ಗದ್ದೆಗಳಲ್ಲಿ ನಾಟಿ ವೇಳೆ ಪಾರ್ದನ, ಜಾನಪದ ಹಾಡುಗಳು ಮತ್ತು ರೈತರ ಶ್ರಮಗೀತೆ ಮೊಳಗುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಸ್ಥಳೀಯ ಕೃಷಿ ಕಾರ್ಮಿಕರ ಕೊರತೆಯಿಂದ ಉತ್ತರ ಕರ್ನಾಟಕದ ಗಂಗಾವತಿ ಭಾಗದ ನಾಟಿ ತಂಡಗಳು ಕರಾವಳಿಗೆ ಆಗಮಿಸುತ್ತಿದ್ದು, ಅವರೊಂದಿಗೆ ಉತ್ತರ ಕರ್ನಾಟಕದ ಭಕ್ತಿ ಗೀತೆಗಳೂ ತುಳುನಾಡಿನ ಗದ್ದೆಗಳಲ್ಲಿ ಪ್ರತಿಧ್ವನಿಸುತ್ತಿವೆ.ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಗಂಗಾವತಿಯಿಂದ ಬಂದ ಸುಮಾರು 30 ಮಂದಿ ಕೃಷಿ ಕಾರ್ಮಿಕರ ತಂಡ ನಾಟಿ ಕಾರ್ಯದಲ್ಲಿ ತೊಡಗಿಕೊಂಡಿದೆ. ತಂಡದ ನೇತೃತ್ವವನ್ನು ಶರಣಬಸವ ವಹಿಸಿಕೊಂಡಿದ್ದು, ಉಡುಪಿ, ಕಾರ್ಕಳ, ಬೆಳ್ಮಣ್, ಕುಂದಾಪುರ ಹಾಗೂ ಬೈಂದೂರು ಭಾಗಗಳಲ್ಲಿ ಇವರ ತಂಡ ಸೇರಿದಂತೆ ಸುಮಾರು 800ಕ್ಕೂ ಅಧಿಕ ಕಾರ್ಮಿಕರು ನಾಟಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈ ತಂಡ ಬೆಳಗ್ಗೆ 6.30ಕ್ಕೆ ನಾಟಿ ಆರಂಭಿಸಿ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ದುಡಿಯುತ್ತದೆ. ದಿನಕ್ಕೆ ಸರಾಸರಿ 7ರಿಂದ 9 ಎಕರೆವರೆಗೆ ನಾಟಿ ಮಾಡುವ ಸಾಮರ್ಥ್ಯ ಹೊಂದಿದ್ದು, ಅನುಕೂಲಕರ ಪರಿಸ್ಥಿತಿಯಲ್ಲಿ 9 ಎಕರೆಗೂ ಹೆಚ್ಚು ನಾಟಿ ಮಾಡಿದ ಅನುಭವವೂ ಇದೆ ಎಂದು ತಂಡದ ಸದಸ್ಯರು ತಿಳಿಸುತ್ತಾರೆ.ನಾಟಿ ಮಾಡುವ ವೇಳೆ ತಂಡದ ಮಹಿಳೆಯರು ಮಲ್ಲಯ್ಯ, ಶ್ರಿಶೈಲ ದೇವರು, ಮಲ್ಲಮ್ಮ ಹಾಗೂ ದುರ್ಗಮ್ಮ ದೇವಿಯರ ಭಜನೆಗಳನ್ನು ಹಾಡುತ್ತಾ ಕೆಲಸ ಮಾಡುತ್ತಾರೆ. ಒಬ್ಬರು ಹಾಡು ಆರಂಭಿಸಿದರೆ ಉಳಿದವರು ಕೊರಸ್ ನೀಡುತ್ತಾ ಗದ್ದೆಯ ಕೆಲಸವನ್ನು ಹಬ್ಬದ ವಾತಾವರಣವನ್ನಾಗಿ ಪರಿವರ್ತಿಸುತ್ತಾರೆ. ಈ ಭಕ್ತಿ ಗೀತೆಗಳು ಗದ್ದೆಗಳಲ್ಲಿ ವಿಶಿಷ್ಟ ಸಾಂಸ್ಕೃತಿಕ ಸೊಗಡನ್ನು ಮೂಡಿಸುತ್ತಿವೆ.ಸ್ಥಳೀಯ ರೈತರ ಪ್ರಕಾರ, ಗ್ರಾಮೀಣ ಭಾಗದಲ್ಲಿ ಕೃಷಿ ಕೂಲಿಕಾರರ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುವಕರು ಕೃಷಿ ಕೆಲಸದಿಂದ ದೂರ ಸರಿಯುತ್ತಿರುವುದು ಹಾಗೂ ಸ್ಥಳೀಯ ಮಟ್ಟದಲ್ಲಿ ನಿಪುಣ ನಾಟಿ ಕಾರ್ಮಿಕರು ದೊರೆಯದಿರುವುದರಿಂದ ಹೊರ ಜಿಲ್ಲೆಗಳ ಕಾರ್ಮಿಕರನ್ನೇ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಉತ್ತರ ಕರ್ನಾಟಕ ಹಾಗೂ ಒಡಿಶಾದ ಕಾರ್ಮಿಕರಿಗೆ ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಉಂಟಾಗಿದೆ.ಗಂಗಾವತಿ ಭಾಗದಲ್ಲಿ ಆಗಸ್ಟ್ ತಿಂಗಳಿನಿಂದ ತುಂಗಭದ್ರಾ ಅಣೆಕಟ್ಟಿನ ನೀರು ಲಭ್ಯವಾದ ಬಳಿಕ ನಾಟಿ ಕಾರ್ಯ ಆರಂಭವಾಗುತ್ತದೆ. ಅದಕ್ಕೂ ಮುನ್ನ ಅಲ್ಲಿನ ಕಾರ್ಮಿಕರು ದುಡಿಮೆಯ ಹುಡುಕಾಟದಲ್ಲಿ ಕರಾವಳಿ ಜಿಲ್ಲೆಗಳಿಗೆ ಆಗಮಿಸಿ ಎರಡು ತಿಂಗಳ ಕಾಲ ಇಲ್ಲಿ ಕೃಷಿ ಕೆಲಸ ನಿರ್ವಹಿಸುತ್ತಾರೆ. ನಂತರ ತಮ್ಮ ಊರಿಗೆ ಮರಳಿ ಸ್ವಂತ ಜಮೀನಿನ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ.ತುಳುನಾಡಿನ ಕೃಷಿ ಸಂಸ್ಕೃತಿಯಲ್ಲಿ ಕಾರ್ಮಿಕರ ಕೊರತೆಯಿಂದ ಉಂಟಾಗಿರುವ ಬದಲಾವಣೆಯ ನಡುವೆ, ಉತ್ತರ ಕರ್ನಾಟಕದ ಭಕ್ತಿ ಗೀತೆಗಳು ಗದ್ದೆಗಳಲ್ಲಿ ಹೊಸ ಸಾಂಸ್ಕೃತಿಕ ಮೇಳೈಸುವಿಕೆಗೆ ಕಾರಣವಾಗಿವೆ.

ಸ್ನಾತಕೋತ್ತರ ಪದವಿಧರರೂ ಇದ್ದಾರೆ!

ಕೂಲಿಯ ವಿಚಾರದಲ್ಲಿ ರೈತರು ಕಾರ್ಮಿಕರಿಗೆ ದಿನಕ್ಕೆ ಸುಮಾರು ₹800 ಹಾಗೂ ಊಟದ ವ್ಯವಸ್ಥೆ ಮಾಡಿಕೊಡುತ್ತಾರೆ. ಈ ಕಾರಣದಿಂದ ಗಂಗಾವತಿ ಭಾಗದ ಅನೇಕ ಕುಟುಂಬಗಳಿಗೆ ಕರಾವಳಿಯ ನಾಟಿ ಕೆಲಸ ಪ್ರಮುಖ ಆದಾಯದ ಮೂಲವಾಗಿದೆ. ತಂಡದಲ್ಲಿರುವ ಕೆಲವರು ಎಂ.ಎ., ಬಿ.ಎಡ್. ಸೇರಿದಂತೆ ಉನ್ನತ ಶಿಕ್ಷಣ ಪಡೆದವರಾಗಿದ್ದರೂ ತಮ್ಮ ಊರಲ್ಲಿ ಸೂಕ್ತ ಉದ್ಯೋಗ ದೊರೆಯದ ಕಾರಣ ಕೃಷಿ ಕೂಲಿ ಕೆಲಸವನ್ನೇ ಜೀವನೋಪಾಯವಾಗಿ ಆರಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ತುಳುನಾಡಿನ ಗದ್ದೆಗಳಲ್ಲಿ ಪಾಡ್ದನ ಮೊಳಗುತ್ತಿತ್ತು. ಇಂದು ಉತ್ತರ ಕರ್ನಾಟಕದ ಭಕ್ತಿ ಗೀತೆಗಳು ಪ್ರತಿಧ್ವನಿಸುತ್ತಿವೆ. ಕೃಷಿ ಉಳಿಯಬೇಕಾದರೆ ಗದ್ದೆಗೆ ಶ್ರಮಿಕರೆ ಬೇಕು.

-ಹರಿಪ್ರಕಾಶ್ ಸ್ಥಳೀಯರು, ಬೆಳ್ಮಣ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಮಿಕಲ್‌ ಮಿಶ್ರಿತ ಹಾಲು ಪೂರೈಕೆ ತಡೆಯಲು ಆಗ್ರಹಿಸಿ ಡಿಸಿಗೆ ಮನವಿ
ಹಾವುಗಳ ಬಗೆಗಿನ ಮೂಢನಂಬಿಕೆ ಬಿಟ್ಟು ರಕ್ಷಣೆ ಮಾಡಿ: ಎಸ್ಪಿ ಲಕ್ಷ್ಮಣ ನಿಂಬರಗಿ