ಉಬರ್‌ ಬಾಡಿಗೆ ಕಾರಿನಲ್ಲಿ ಲವ್ವರ್ ಬಾಂಬ್‌ ಸ್ಫೋಟ!

Published : Jun 28, 2026, 04:56 AM IST
man dies after petrol bomb explosion inside car in karnataka

ಸಾರಾಂಶ

ಮದುವೆಯಾಗಲು ಒಲ್ಲೆ ಎಂದ ಪ್ರೇಯಸಿಯನ್ನು ಪಾಗಲ್‌ ಪ್ರೇಮಿಯೊಬ್ಬ ಬೆಂಗಳೂರಿನಿಂದ ಉಬರ್‌ ಬಾಡಿಗೆ ಕಾರೊಂದರಲ್ಲಿ ಬಲವಂತವಾಗಿ ಕರೆದೊಯ್ದಿದ್ದಲ್ಲದೆ, ದಾರಿ ಮಧ್ಯೆ ಆಕೆಗೆ ಚಾಕುವಿನಿಂದ ಇರಿದು, ಕಾರಿನೊಳಗೆ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಆತ್ಮ*ತ್ಯೆ

  ತುಮಕೂರು :  ಮದುವೆಯಾಗಲು ಒಲ್ಲೆ ಎಂದ ಪ್ರೇಯಸಿಯನ್ನು ಪಾಗಲ್‌ ಪ್ರೇಮಿಯೊಬ್ಬ ಬೆಂಗಳೂರಿನಿಂದ ಉಬರ್‌ ಬಾಡಿಗೆ ಕಾರೊಂದರಲ್ಲಿ ಬಲವಂತವಾಗಿ ಕರೆದೊಯ್ದಿದ್ದಲ್ಲದೆ, ದಾರಿ ಮಧ್ಯೆ ಆಕೆಗೆ ಚಾಕುವಿನಿಂದ ಇರಿದು, ಕಾರಿನೊಳಗೆ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಜೋಗಿಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ನಾಗೇಂದ್ರ (30) ಆತ್ಮ*ತ್ಯೆ ಮಾಡಿಕೊಂಡ ಪ್ರೇಮಿ. ಆತನ ಪಕ್ಕದೂರಿನ ಯುವತಿ ರಮ್ಯಾ ಉಲ್ಲಾಸ್‌ (23) ಚಾಕು ಇರಿತಕ್ಕೊಳಗಾದ ಪ್ರೇಯಸಿ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ನಾಗೇಂದ್ರ ಹಾಗೂ ರಮ್ಯಾ, ಅಂಕೋಲಾ ಮೂಲದವರಾಗಿದ್ದು, ಅಕ್ಕ ಪಕ್ಕದ ಊರಿನವರು. ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ದಿನಗಳಲ್ಲೇ ಇವರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಮದುವೆ ಮಾಡಿಕೊಳ್ಳುವ ವಿಷಯಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ರಮ್ಯಾ ಮದುವೆಗೆ ನಿರಾಕರಿಸಿದ್ದಳು. ಬಳಿಕ, ಆತನ ನಂಬರ್ ನ್ನು ಬ್ಲಾಕ್ ಮಾಡಿದ್ದಳು.

ನಾಗೇಂದ್ರ ಈ ಹಿಂದೆ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಕೆಲಸವಿಲ್ಲದೆ ಅಲೆಯುತ್ತಿದ್ದ. ರಮ್ಯಾ, ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು.

ರಮ್ಯಾ ತನ್ನ ನಂಬರ್ ಬ್ಲಾಕ್ ಮಾಡಿದ್ದರಿಂದ ಆಕ್ರೋಶಗೊಂಡಿದ್ದ ನಾಗೇಂದ್ರ, ಶನಿವಾರ ಬೆಳಗ್ಗೆ ಉಬರ್‌ ಕಾರೊಂದನ್ನು ಬುಕ್‌ ಮಾಡಿಕೊಂಡು, ಬೆಳಗ್ಗೆ ಸುಮಾರು 7 ಗಂಟೆ ವೇಳೆಗೆ ರಮ್ಯಾ ತಂಗಿದ್ದ ರೂಮ್ ಬಳಿ ಬಂದಿದ್ದ. ಯಾವುದೋ ಸುಳ್ಳು ನೆಪ ಹೇಳಿ, ಊರಿಗೆ ಬರುವಂತೆ ಬಲವಂತವಾಗಿ ಆಕೆಯನ್ನು ಕಾರಿನಲ್ಲಿ ಕರೆದೊಯ್ದಿದ್ದ.

ದಾರಿ ಮಧ್ಯೆ, ಮದುವೆ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಈ ವಿಚಾರವಾಗಿ ರಮ್ಯಾ, ತನ್ನ ಸ್ನೇಹಿತೆಗೆ ಮೆಸೇಜ್ ಕಳುಹಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಸ್ನೇಹಿತೆ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ದಾಖಲಿಸಿದ್ದಾಳೆ.

ಕಾರು ಶಿರಾ ಸಮೀಪದ ಜೋಗಿಹಳ್ಳಿಗೆ ಬರುತ್ತಿದ್ದಂತೆ ಗಲಾಟೆ ಜೋರಾಗಿ, ನಾಗೇಂದ್ರ ಆಕೆಯ ತಲೆಗೆ ಚಾಕುವಿನಿಂದ ಚುಚ್ಚಿ, ಹಲ್ಲೆ ನಡೆಸಿದ. ಕೂಡಲೇ ಕಾರಿನ ಚಾಲಕ ಸಮಯ ಪ್ರಜ್ಞೆ ಮೆರೆದು ರಸ್ತೆ ಪಕ್ಕ ಕಾರು ನಿಲ್ಲಿಸಿ, ಆಕೆಯನ್ನು ರಕ್ಷಿಸಿ, ಬೈಕ್‌ನಲ್ಲಿ ಹತ್ತಿಸಿ ಕಳಿಸಿದ. ಈ ವೇಳೆ, ಕಾರಿನೊಳಗೆ ಒಬ್ಬನೇ ಇದ್ದ ನಾಗೇಂದ್ರ, ಕಾರಿನ ಎಲ್ಲಾ ಡೋರ್ ಲಾಕ್ ಮಾಡಿಕೊಂಡು, ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಕಾರು ಸುಟ್ಟು ಕರಕಲಾಗಿದ್ದು, ನಾಗೇಂದ್ರ ಕೂಡ ಕಾರಿನೊಳಗೆ ಸಜೀವ ದಹನವಾಗಿದ್ದಾನೆ.

ತುಮಕೂರು ಎಸ್ಪಿ ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ಕುರಿತು ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ, ಯುವತಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆಗಿದ್ದೇನು?

- ಮೃತ ನಾಗೇಂದ್ರ ಹಾಗೂ ರಮ್ಯಾ, ಅಂಕೋಲಾ ಮೂಲದವರು

ನಾಗೇಂದ್ರ ಹಾಗೂ ರಮ್ಯಾ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು

- ಮೊದಲು ಪರಸ್ಪರ ಪ್ರೀತಿಸುತ್ತಿದ್ದರೂ ಇತ್ತೀಚೆಗೆ ದೂರ ಆಗಿದ್ದರು

- ನೆಪ ಹೇಳಿ ಅಂಕೋಲಾಗೆ ಉಬರ್‌ ಕಾರು ಬುಕ್‌ ಮಾಡಿದ್ದ ನಾಗೇಂದ್ರ

- ರಮ್ಯಾಳನ್ನು ಕಾರಲ್ಲಿ ಕರೆದೊಯ್ಯುವಾಗ ಜಗಳ, ಆಕೆಗೆ ಚೂರಿ ಇರಿತ

- ಚಾಲಕ ಹೊರಬಂದಾಗ ಪೆಟ್ರೋಲ್‌ ಬಾಂಬ್‌ ಸ್ಫೋಟಿದ ನಾಗೇಂದ್ರ

PREV
Stay updated with the latest news from Tumkur district (ತುಮಕೂರು ಸುದ್ದಿ) — local politics, development, infrastructure, social issues, crime, environment and community affairs in the district on Kannada Prabha News.
Read more Articles on

Recommended Stories

ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಜವಾಬ್ದಾರಿ ಮುಖ್ಯ
ಕೆಂಪೇಗೌಡರು ಸಾಮಾಜಿಕ ನ್ಯಾಯದ ಹರಿಕಾರ