ಕನ್ನಡಪ್ರಭವಾರ್ತೆ ತುರುವೇಕೆರೆ
ನಾಡಪ್ರಭು ಕೆಂಪೇಗೌಡರು ಕೇವಲ ಒಂದೇ ಸಮುದಾಯಕ್ಕೆ ಸೇರಿದ ವ್ಯಕ್ತಿಯಲ್ಲ. ಅವರು ಎಲ್ಲಾ ಸಮುದಾಯವರನ್ನು ಒಂದೇ ಎಂದು ಭಾವಿಸಿದ್ದ ಪುಣ್ಯಾತ್ಮ. ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದರೂ ತಪ್ಪಾಗಲಾರದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗರ ನೌಕರರ ಸಂಘ, ಕಾಲಭೈರವೇಶ್ವರ ಮಹಿಳಾ ಸಂಘ, ಕೆಂಪೇಗೌಡ ಯುವ ಸೇನೆ ಹಾಗೂ ನೇಗಿಲಯೋಗಿ ಸೇವಾ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ರ 517 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಐಟಿ. ಬಿ.ಟಿ ನಗರ ಎಂಬ ಖ್ಯಾತಿ ಪಡೆದ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರು ಎಲ್ಲ ವರ್ಗದ ಜನರ ವ್ಯಾಪಾರ ವಹಿವಾಟಿಗಾಗಿ ಸುಮಾರು 54 ಪೇಟೆಗಳನ್ನು ನಿರ್ಮಿಸಿದ್ದರು. ಅವರ ದೂರದೃಷ್ಟಿಯ ಚಿಂತನೆಯಿಂದ ಬೆಂಗಳೂರು ನಗರ ನಿರ್ಮಾಣವಾಗಿತ್ತು. ಅಂದು ಮಾಡಿದ ಮಹಾನ್ ಕಾರ್ಯದಿಂದ ಇವತ್ತು ಬೆಂಗಳೂರು ಗ್ರೇಟರ್ ಬೆಂಗಳೂರು ಆಗಿದೆ. ಸರ್ಕಾರ ಮತ್ತು ಭೂಮಾಫಿಯಾದವರು ಲ್ಯಾಂಡ್ ಡೆವಲಪ್ಮೆಂಟ್ ಅಭಿವೃದ್ಧಿ ಹೆಸರಿನಲ್ಲಿ ಕೆರೆಗಳು, ಭೂಮಿಗಳನ್ನು ನುಂಗಿ ನೀರು ಕುಡಿದಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದರು.
ವಿಶೇಷ ಅತಿಥಿಗಳಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಂಕೇಗೌಡರು ಮಾತನಾಡಿ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹ ಮಾಡಿದ್ದೇನೆ. ಇಂದಿನ ಮಕ್ಕಳು ಓದಲು ಆಸಕ್ತಿ ತೋರುತ್ತಿಲ್ಲ ಎಂದು ಬೇಸರಿಸಿಕೊಂಡರು. ಪೋಷಕರು ತಮ್ಮ ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮೂಡಿಸಬೇಕೆಂದು ಹೇಳಿದರು. ಕೆ.ಆರ್.ಡಿ.ಎಲ್ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿ ಅರ್ಥಪೂರ್ಣವಾಗಿದೆ. ಬೆಂಗಳೂರು ನಗರ ಬೆಳೆದಿದೆ. ದೇಶದ ಎಲ್ಲ ಭಾಗದ ಜನರು ಆಗಮಿಸಿ ನೆಲೆಸಿ ಬದುಕು ಕಟ್ಟಿಕೊಂಡಿದ್ದಾರೆ. ಬೆಂಗಳೂರು ಅನ್ಯ ವಲಸಿಗರ ತಾಣವಾಗುತ್ತಿದೆ. ಇತ್ತೀಚಿನ ವಲಸಿಗರನ್ನು ನೋಡಿದರೆ ಜನರಿಗೆ ಕುಡಿಯುವ ನೀರು, ನೈರ್ಮಲ್ಯ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ವಿಜಯಕುಮಾರ್ ಕೆಂಪೇಗೌಡರ ಬಗ್ಗೆ ಉಪನ್ಯಾಸ ನೀಡಿದರು. ಆದಿಚುಂಚನಗಿರಿ ಮಠದ ಸಂಮಿದಾನನಂದನಾಥ ಸ್ವಾಮೀಜಿ ಆಶೀರ್ವಾಚನ ನೀಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕುಂ.ಇ.ಅಹಮದ್, ಇ.ಓ.ಅನಂತರಾಮಯ್ಯ, ತುಮಲ್ ನಿರ್ದೇಶಕ ಸಿ.ವಿ.ಮಹಾಲಿಂಗಯ್ಯ, ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ರಂಗನಾಥ, ಪಾಪಣ್ಣ, ಡಿ.ಪಿ.ರಾಜು, ವಿಜಯಲಕ್ಷ್ಮಿಎನ್.ಆರ್.ಜಯರಾಮ್, ಸಿದ್ದೇಗೌಡ, ಗಂಗಾಧರ್, ಡಾ.ಚೌದ್ರಿನಾಗೇಶ್, ರಾಜೀವ್ ಕೃಷ್ಣಪ್ಪ, ಎಚ್. ಆರ್.ರಾಮೇಗೌಡ ಇತರರಿದ್ದರು.