;Resize=(412,232))
ತುಮಕೂರು : ಸಾಮಾನ್ಯವಾಗಿ ಚಿನ್ನಾಭರಣ ಅಂಗಡಿಗಳಿಗೆ ಖದೀಮರು ಕನ್ನಹಾಕಿ ಚಿನ್ನ ದೋಚುತ್ತಾರೆ. ಆದರೆ ಇಲ್ಲಿ ಇಲಿಯೊಂದು ಜ್ಯುವೆಲ್ಲರಿ ಅಂಗಡಿಯಲ್ಲಿದ್ದ 10 ಲಕ್ಷ ರು. ಮೌಲ್ಯದ 50 ಗ್ರಾಂಗೂ ಅಧಿಕ ವಜ್ರ ಹಾಗೂ ಚಿನ್ನಾಭರಣವನ್ನು ಹೊತ್ತೊಯ್ದು ಬಿಲದಲ್ಲಿ ಅಡಗಿಸಿಟ್ಟಿದ್ದ ಅಪರೂಪದ ಘಟನೆ ತುಮಕೂರಿನ ವಿಶ್ವಾಸ ಜ್ಯುವೆಲ್ಲರಿ ಶಾಪ್‌ನಲ್ಲಿ ವರದಿಯಾಗಿದೆ.
ಅಂಗಡಿ ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ. ಹೀಗಿದ್ದರೂ ಆಭರಣ ಕಳುವಾಗಿರುವ ಬಗ್ಗೆ ಶಾಪ್‌ನ ಸಿಬ್ಬಂದಿಗೆ ಅಚ್ಚರಿಯಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡುವ ಮುನ್ನ ಅಂಗಡಿಯಲ್ಲಿದ್ದ ಸಿಸಿಟೀವಿ ನೋಡಿದಾಗ ಮಾಲೀಕರು ಹಾಗೂ ಸಿಬ್ಬಂದಿ ಬೆರಗಾಗಿದ್ದಾರೆ.
ಇಲಿಯೊಂದು ಆಭರಣಗಳನ್ನು ಹೊತ್ತೊಯ್ದುತ್ತಿದ್ದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಸಿಸಿಟೀವಿ ವೀಕ್ಷಿಸಿದ ಬಳಿಕ ಅಂಗಡಿಯ ಸಿಬ್ಬಂದಿ ಇಲಿ ಜಾಡು ಹಿಡಿದು ಹೊರಟಾಗ ಆಭರಣಗಳು ಇಲಿಯ ಬಿಲದಲ್ಲಿ ಪತ್ತೆಯಾಗಿದೆ. 10 ಉಂಗುರ ಹಾಗೂ 3 ಸರವನ್ನು ಇಲಿ ತನ್ನ ಬಿಲದಲ್ಲಿ ಅಡಗಿಸಿಟ್ಟಿತ್ತು. ಕೊನೆಗೂ ಆಭರಣ ಸಿಕ್ಕ ಬಳಿಕ ಜ್ಯುವೆಲ್ಲರಿ ಶಾಪ್ ಮಾಲೀಕ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.