ತುಮಕೂರು-ದಾವಣಗೆರೆ ರೈಲ್ವೆ ಕಾಮಗಾರಿ ಆರಂಭಿಸಿ: ಆರ್.ವಿ.ಪುಟ್ಟಕಾಮಣ್ಣ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ತುಮಕೂರು-ದಾವಣಗೆರೆ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ ಶಿರಾ ತಾಲೂಕಿನ ಜನತೆಯ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿ ಎಂದು ತುಮಕೂರು ಜಿಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಅಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ಒತ್ತಾಯಿಸಿದರು.

ನಗರದ ಜನತಾ ದರ್ಶನದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಶಿರಾ

ತುಮಕೂರು-ದಾವಣಗೆರೆ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ ಶಿರಾ ತಾಲೂಕಿನ ಜನತೆಯ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿ ಎಂದು ತುಮಕೂರು ಜಿಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಅಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಜನತಾ ದರ್ಶನದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸಚಿವ ಎ. ನಾರಾಯಣಸ್ವಾಮಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ತುಮಕೂರು-ದಾವಣಗೆರೆ ರೈಲು ಮಾರ್ಗವು ಮಂಜೂರಾಗಿ 13 ವರ್ಷಗಳು ಕಳೆದಿದ್ದರೂ ಈವರೆವಿಗೂ ಕಾಮಗಾರಿ ಪ್ರಾರಂಭವಾಗಿಲ್ಲ. ಭೂಸ್ವಾದೀನ ಪ್ರಕ್ರಿಯೆಯು ಕುಂಟುತ್ತಾ ಸಾಗಿದೆ. ಈ ರೈಲು ಮಾರ್ಗವು 199.7 ಕಿ.ಮೀ. ಉದ್ದವಿದೆ. ಅಂದಾಜು ವೆಚ್ಚ 970 ಕೋಟಿ ರು ಆಗಿದ್ದು, ರಾಜ್ಯ ಸರ್ಕಾರ ಶೇ. 50 ರಷ್ಟು ಹೊಣೆ ಹೋರಲು ಮತ್ತು ಯೋಜನೆಗೆ ಬೇಕಾದ ಭೂಮಿಯನ್ನು ಉಚಿತವಾಗಿ ಕೊಡಲು 2010ರಲ್ಲಿಯೇ ಆದೇಶ ಮಾಡಿದೆ. 2017ಕ್ಕೆ ತುಮಕೂರು-ದಾವಣಗೆರೆ ರೈಲು ಮಾರ್ಗ ಲೋಕಾರ್ಪಣೆಗೊಳ್ಳಬೇಕಿತ್ತು. ತುಮಕೂರು ಚಿತ್ರದುರ್ಗ, ದಾವಣಗೆರೆ ಮೂರು ಜಿಲ್ಲೆಗಳ ಬೇಡಿಕೆಯಾಗಿರುವ ಈ ರೈಲು ಮಾರ್ಗವನ್ನು ಶೀಘ್ರ ಪ್ರಾರಂಭಿಸಬೇಕು. ಬಯಲುಸೀಮೆ ಪ್ರದೇಶವಾದ ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ರೈಲ್ವೇ ಮಾರ್ಗದ ಅನುಷ್ಠಾನದಿಂದ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ ಎಂದರು.

ತುಮಕೂರು-ದಾವಣಗೆರೆ ರೈಲು ಮಾರ್ಗದ ಅನುಷ್ಠಾನದಿಂದ ಮಧ್ಯಮ-ವಾಯುವ್ಯ ಮತ್ತು ಈಶಾನ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳು ರಾಜಧಾನಿಗೆ ನೇರ ಸಂಪರ್ಕ ಪಡೆಯುತ್ತವೆ. ಇದರಿಂದ ನೂರಾರು ಕಿ.ಮೀ. ದೂರ ಕಡಿಮೆಯಾಗುತ್ತದೆ. ಇದರಿಂದ ಸಮಯ, ಹಣ, ಶ್ರಮ, ವೆಚ್ಚ ಕಡಿಮೆಯಾಗಿ ಇಂಧನದ ಉಳಿತಾಯವಾಗಲಿದೆ. ಸುವರ್ಣ ಕಾರಿಡಾರ್ ಹಾಗೂ ಚಳ್ಳಕೆರೆ ಬಳಿ ಸ್ಥಾಪಿತವಾಗಿರುವ ಡಿಆರ್‌ಡಿಒ ಘಟಕಗಳಿಗೆ ಪೂರಕವಾಗಿದೆ. ಹಿಂದುಳಿದ ಪ್ರದೇಶದ ಜನರಿಗೆ ಸುಲಭ ಸಂಚಾರ ಸಾರಿಗೆ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸಿದಂತಾಗುತ್ತದೆ. ೨೦೨೪ರ ಜನವರಿ ಒಳಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಕಾರ್ಯದರ್ಶಿ ಎಂ.ಆರ್. ರಂಗನಾಥ್, ತಾಲೂಕು ಅಧ್ಯಕ್ಷ ಕೆ. ಬೊಮ್ಮಲಿಂಗಯ್ಯ, ಕಾರ್ಯದರ್ಶಿ ಮಹಮದ್ ಜಿಯಾವುಲ್ಲಾ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಸಾಮಾಜಿಕ ಹೋರಾಟಗಾರ ನೇರಲಗುಡ್ಡ ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು. ಫೋಟೊ17ಶಿರಾ2:

ಶಿರಾ ನಗರದಲ್ಲಿ ಏರ್ಪಡಿಸಿದ್ದ ಜನತಾ ದರ್ಶನದಲ್ಲಿ ತುಮಕೂರು-ದಾವಣಗೆರೆ ರೈಲುಮಾರ್ಗದ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸುವಂತೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ಸೇರಿದಂತೆ ಹಲವರು ಹಾಜರಿದ್ದರು.

Share this article