ಕನ್ನಡಪ್ರಭ ವಾರ್ತೆ ತುಮಕೂರು
ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನಕ್ಕೆ ವಿವಿಧ ತಳಿಯ ತರೇಹವಾರಿ ಶ್ವಾನಗಳು ಹಾಗೂ ಬೆಕ್ಕುಗಳನ್ನು ಕರೆತರಲಾಗಿತ್ತು. ಮಾಲೀಕರು ತಮ್ಮ ಮನೆಯಲ್ಲಿ ಸಾಕಿದ್ದ ವಿವಿಧ ತಳಿಯ ಶ್ವಾನಗಳು ಮತ್ತು ಬೆಕ್ಕುಗಳನ್ನು ಈ ಕಾರ್ಯಕ್ರಮಕ್ಕೆ ಕರೆ ತಂದು ಪ್ರದರ್ಶಿಸಿದ್ದು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.
ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯತ್ ಮುಖ್ಯ ಸಿಇಒ ಜಿ. ಪ್ರಭು ಮಾತನಾಡಿ, ಶ್ವಾನ ಎಂದಾಕ್ಷಣ ನಮಗೆಲ್ಲಾ ನೆನಪಿಗೆ ಬರುವುದು ಇತ್ತೀಚಿನ ದಿನಗಳಲ್ಲಿ ಮಾನವಲ್ಲಿ ಕಡಿಮೆಯಾಗುತ್ತಿರುವ ಮೌಲ್ಯಗಳು. ನಿಷ್ಠೆ, ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ ಎಂದರು.ಬೆಕ್ಕುಗಳು ಸಹ ಮನೆಯಲ್ಲಿ ನಮ್ಮಗಳ ಜತೆ ಸಾಕುತ್ತಿದ್ದೇವೆ. ಬದ್ಧತೆ, ಸ್ವಾಮಿ ನಿಷ್ಠೆ ಎಂದರೆ ನಮ್ಮ ವಿವೇಚನೆಗೆ ಬರುವುದು ಶ್ವಾನಗಳು ಎಂದು ಹೇಳಿದರು.
ಕರ್ನಾಟಕ ಪಶು ವೈದ್ಯಕೀಯ ಸಂಘದ ತುಮಕೂರು ಅಧ್ಯಕ್ಷ ಡಾ. ವೈ.ಜಿ. ಕಾಂತರಾಜು ಮಾತನಾಡಿ, ಅನಾದಿ ಕಾಲದಿಂದ ಮಾನವನ ಒಡನಾಡಿಯಾಗಿರುವ ನಿಷ್ಠೆ, ಪ್ರೀತಿಗೆ ಪಾತ್ರರಾಗಿರುವಂತಹ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಪ್ರಾಣಿ ಪ್ರಿಯರಲ್ಲಿ ಜಾಗೃತಿ ಮೂಡಿಸಲು ಹಾಗೂ ವೈಜ್ಞಾನಿಕವಾದ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಜಿ. ಗಿರೀಶ್‌ಬಾಬು ರೆಡ್ಡಿ ಮಾತನಾಡಿ, ಜಿಲ್ಲಾ ಮಟ್ಟದ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನದಲ್ಲಿ ೨೫ಕ್ಕೂ ಹೆಚ್ಚು ಜಾತಿಯ ೨೫೦ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿವೆ ಎಂದರು.
ಇದೇ ಸಂದರ್ಭದಲ್ಲಿ ಇಲಾಖೆ ಹೊರ ತಂದಿದ್ದ ಸ್ಮರಣ ಸಂಚಿಕೆಯನ್ನು ಸಿಇಒ ಬಿಡುಗಡೆ ಮಾಡಿದರು.