ಕೊಪ್ಪಳ: ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ವಿದ್ಯಾರ್ಥಿ, ಯುವಜನ-ಮಹಿಳಾ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜೆಸಿಟಿಯು ಜಂಟಿಯಾಗಿ ನಗರದ ಈಶ್ವರ್ ಪಾರ್ಕ್ ನಿಂದ ಪ್ರತಿಭಟನೆ ಮೆರವಣಿಗೆ ನಡೆಸಿದರು.ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕೇಂದ್ರ ಸರ್ಕಾರ ಡಾ.ಸ್ವಾಮಿನಾಥನ ಶಿಫಾರಸಿನಂತೆ ಬೆಂಬಲ ಬೆಲೆ ಕಾನೂನು ರಚಿಸುವುದಾಗಿ ತಿಳಿಸಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಮತ್ತು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ದೊಡ್ಡ ದೊಡ್ಡ ಘೋಷಣೆಗಳನ್ನು ಕೂಗುತ್ತ ದೇಶದ ಜನರ ಭರವಸೆಗಳನ್ನು ಕಳೆದ 10 ವರ್ಷಗಳಲ್ಲಿ ಸುಳ್ಳು ಮಾಡಿದ್ದಾರೆ ಎಂದರು.ಇನ್ನೊಂದೆಡೆ ಕೆಲವೇ ಕಾರ್ಪೊರೇಟ್ ಮನೆತನಗಳ ಪರವಾಗಿ ನೀತಿಗಳನ್ನು ಜಾರಿ ಮಾಡಿ ಶ್ರೀಮಂತರನ್ನು ಆಗರ್ಭ ಶ್ರೀಮಂತರನ್ನಾಗಿ ಮಾಡಿದ್ದಾರೆ. ದೆಹಲಿಯ ಗಡಿಯಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ದೌರ್ಜನ್ಯ ಮಾಡುವ ಕೇಂದ್ರ ಸರ್ಕಾರದ ಧೋರಣೆ ಖಂಡನೀಯ ಎಂದರು.ಕಾರ್ಮಿಕ ಮುಖಂಡ ಕಾಸಿಂ ಸರ್ದಾರ್ ಮಾತನಾಡಿ, ಆರ್ಥಿಕ ಬಿಕ್ಕಟ್ಟು ಸುಧಾರಿಸಿದರೆ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಿ ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿ ಹಕ್ಕನ್ನು ಏಕೆ ಕಸಿಯಲಾಗುತ್ತಿದೆ? ಐದು ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಭಾರತದಲ್ಲಿ ಶೇ.42.3 ನಿರುದ್ಯೋಗ ಏಕೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.ಎಐಟಿಯುಸಿ ಬಸವರಾಜ ಶೀಲವಂತರ ಹಾಗೂ ಕರ್ನಾಟಕ ರೈತ ಸಂಘದ ಮುಖಂಡ ಡಿ.ಎಚ್. ಪೂಜಾರ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತ ಬೆಳೆದ ಬೆಳೆಗೆ ಕೂಡಲೇ ಬೆಂಬಲ ಬೆಲೆ ಕಾನೂನು ಜಾರಿ ಮಾಡಬೇಕು. ಕೋಮು ಭಾವನೆಗಳನ್ನು ಪ್ರಚೋದನೆಗೊಳಿಸಿ ಜನರನ್ನು ಧಾರ್ಮಿಕವಾಗಿ ಹೊಡೆದಾಳುವ ಸರ್ಕಾರದ ಕುತಂತ್ರದ ನೀತಿಗಳನ್ನು ಪ್ರಜ್ಞಾವಂತ ಜನ ವಿರೋಧಿಸಿ ರಾಜಿ ರಹಿತ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.ಎಐಯುಟಿಯುಸಿ ಜಿಲ್ಲಾ ಮುಖಂಡರಾದ ಶರಣು ಗಡ್ಡಿ, ಪ್ರಾಂತ ರೈತ ಸಂಘದ ಜಿ.ನಾಗರಾಜ, ಪಿಯುಸಿಎಲ್ ನ ಮಹಾಂತೇಶ್ ಕೊತ್ಬಾಳ್, ಟಿಯುಸಿಐ ಕೆ.ಬಿ. ಗೋನಾಳ್, ಮುಖಂಡರಾದ ಹನುಮಂತಪ್ಪ ಹುಲಿಹೈದರ, ಕಾಶಪ್ಪ ಚಲವಾದಿ, ಹನುಮೇಶ್ ಕಲ್ಮಂಗಿ, ಶಿವಪ್ಪ ಹಡಪದ, ಬಸವರಾಜ್ ನರೇಗಲ್, ದುರ್ಗೇಶ್ ಕೆವಿಎಸ್, ರಾಮಲಿಂಗ ಶಾಸ್ತ್ರಿ, ಗೌಸಸಾಬ್ ನದಾಫ್, ಎಸ್.ಎ. ಗಫಾರ್, ಸುಂಕಪ್ಪ ಗದಗ, ಕಾರ್ಮಿಕ ಮಹಿಳೆಯರು, ರೈತ ಕಾರ್ಮಿಕರು ಇದ್ದರು.