ತುಮಕೂರು: 9 ರಿಂದ ರಾಷ್ಟ್ರ ಜಾಗೃತಿ ಅಭಿಯಾನ

KannadaprabhaNewsNetwork | Published : Feb 7, 2024 1:51 AM

ಸಾರಾಂಶ

ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ತುಮಕೂರು ವತಿಯಿಂದ ರಾಷ್ಟ್ರ ಜಾಗೃತಿ ಅಭಿಯಾನದ ಅಂಗವಾಗಿ ಫೆ.9 ರಿಂದ 11ರವರೆಗೆ ಮೂರು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ತುಮಕೂರು ವತಿಯಿಂದ ರಾಷ್ಟ್ರ ಜಾಗೃತಿ ಅಭಿಯಾನದ ಅಂಗವಾಗಿ ಫೆ.9 ರಿಂದ 11ರವರೆಗೆ ಮೂರು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಜನಪದ ಕಲಾತಂಡಗಳ ಸ್ಪರ್ಧೆ ಮತ್ತು ರಾಷ್ಟ್ರಭಕ್ತಿ ಗೀತೆಗಳ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿಜೇತರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರು. ದ್ವಿತಿಯ ಬಹುಮಾನವಾಗಿ 40 ಸಾವಿರ ಹಾಗೂ ತೃತೀಯ ಬಹುಮಾನವಾಗಿ 30 ಸಾವಿರ ರು.ಗಳನ್ನು ಎರಡು ಸ್ಪರ್ಧೆಗಳಿಗೆ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕ 500 ರು. ಗಳನ್ನು ಪಾವತಿಸಬೇಕಾಗಿದೆ ಎಂದರು.

ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಫೆ.9 ರ ಶುಕ್ರವಾರ ಸಂಜೆ 5ಗಂಟೆಗೆ ರಾಷ್ಟ್ರ ಜಾಗೃತಿ ಅಭಿಯಾನ ಅಧ್ಯಕ್ಷರಾದ ಎಸ್.ಪಿ. ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದ್ದು, ಜನವರಿ 22ರಂದು ಉದ್ಘಾಟನೆಗೊಂಡ ರಾಮಮಂದಿರ, ನಮ್ಮ ರಾಷ್ಟ್ರಮಂದಿರವಾಗಿದ್ದು, ಇದರ ಪ್ರತಿಕೃತಿಯನ್ನು ತಯಾರಿಸಿ, ನಾಗರಿಕ ದರ್ಶನಕ್ಕೆ ಇಡಲಾಗುವುದು. ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜಿ.ಬಿ. ಜೋತಿಗಣೇಶ್, ರಾಷ್ಟ್ರ ಜಾಗೃತಿ ಅಭಿಯಾನ ಗೌರವಾಧ್ಯಕ್ಷ ಕೋರಿ ಮಂಜುನಾಥ್, ಡಾ.ಎಸ್. ಪರಮೇಶ್, ಡಾ.ಜಿ. ಲಕ್ಷ್ಮಿಕಾಂತ್ ಭಾಗವಹಿಸುವರು.

ಉದ್ಘಾಟನಾ ಕಾರ್ಯಕ್ರಮದ ನಂತರ ಶ್ರೀಸಾಯಿರಾಮನ್ ನೃತ್ಯ ಕೇಂದ್ರದ ವತಿಯಿಂದ ರಾಮಾಯಣ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಅಕರ್ಷಕ ವಿದ್ಯುತ್ ಅಲಂಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ರಾಘವೇಂದ್ರ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ತದನಂತರ ರಾತ್ರಿ 9 ಗಂಟೆಯವರೆಗೆ ಪ್ರಸಿದ್ಧ ಗಾಯಕರಾದ ರಾಮಚಂದ್ರ ಹಡಪದ ಮತ್ತು ತಂಡದವರಿಂದ ಬಾವಲಹರಿ ಕಾರ್ಯಕ್ರಮ ಜರುಗಲಿದೆ ಎಂದರು.

ಫೆ.10ರ ಶನಿವಾರ ಬೆಳಿಗ್ಗೆ 11 ಗಂಟೆಗೆ ರಾಜ್ಯಮಟ್ಟದ ಸಾಂಸ್ಕೃತಿಕ ಜಾನಪದ ಕಲಾ ತಂಡಗಳ ಸ್ಪರ್ಧೆ ಆಯೋಜಿಸಲಾಗಿದ್ದು, ಸಂಜೆ 4 ಗಂಟೆಗೆ ಸಂತರ ನಡೆ –ದೇಶದ ಕಡೆ ಎಂಬ ಘೋಷ ವಾಕ್ಯದೊಂದಿಗೆ ಬಹೃತ್ ಶೋಭಾಯಾತ್ರೆ ನಡೆಯಲಿದೆ. ಸ್ಥಳೀಯ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ಸಾರ್ವಜನಿಕ ಸಮಾರಂಭ ಹಾಗೂ ಜಾನಪದ ಕಲಾ ತಂಡಗಳ ಉತ್ಸವ ನಡೆಯಲಿದೆ.

ಫೆ.11 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ದೇಶಭಕ್ತಿ ಗೀತೆಗಳ ನೃತ್ಯ ಸ್ಪರ್ಧೆಯನ್ನು ಆಯೋಜಿಸಿದ್ದು, ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತಿಯ ಬಹುಮಾನವಾಗಿ 40 ಸಾವಿರ, ತೃತಿಯ ಬಹುಮಾನವಾಗಿ 30 ಸಾವಿರ ರು.ಗಳನ್ನು ನೀಡಲಾಗುವುದು. ಸಂಜೆ 5.30ಕ್ಕೆ ಬನ್ನಿ ರಾಷ್ಟ್ರ ಕಾರ್ಯದಲ್ಲಿ ಒಂದಾಗೋಣ ಎಂಬ ಶೀರ್ಷಿಕೆ ಅಡಿಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು, ಅಂಕಣಕಾರರಾದ ಆದರ್ಶ ಗೋಖಲೆ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ನಂತರ ರಾತ್ರಿ 9 ಗಂಟೆಯವರೆಗೆ ಹೆಸರಾಂತ ಗಾಯಕರಾದ ಹೇಮಂತ್, ಅನುರಾಧ ಭಟ್, ಹನುಮಂತು ಮತ್ತಿತರರಿಂದ ರಸ ಸಂಜೆ ಕಾರ್ಯಕ್ರಮ ಜರುಗಲಿದ್ದು,ರಾಷ್ಟ್ರ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರ ಜಾಗೃತಿ ಅಭಿಯಾನದ ಕಾರ್ಯದರ್ಶಿ ಗೋವಿಂದರಾವ್, ಉಪಾಧ್ಯಕ್ಷ ಜಿ.ಕೆ. ಶ್ರೀನಿವಾಸ್, ಖಜಾಂಚಿ ಈಶ್ವರಗುಪ್ತ ಮತ್ತಿತರರು ಪಾಲ್ಗೊಂಡಿದ್ದರು.

Share this article