
ಕನ್ನಡಪ್ರಭ ವಾರ್ತೆ, ತುಮಕೂರು
ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾಗಿರುವ ವಿಶ್ವ ದರ್ಜೆಯ ಟೆನ್ನಿಸ್ ಅಂಕಣದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಈ ಅಂತಾರಾಷ್ಟ್ರೀಯ ಮಹಿಳಾ ಓಪನ್ ಟೆನ್ನಿಸ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಡಾ. ಪರಮೇಶ್ವರ್ , ತುಮಕೂರು ಎಲ್ಲ ರೀತಿಯಲ್ಲೂ ವೇಗವಾಗಿ ಬೆಳೆಯುತ್ತಿರುವ ನಗರ. ಹಾಗಾಗಿ ತುಮಕೂರನ್ನು ಕ್ರೀಡೆಯಲ್ಲೂ ವಿಶ್ವ ದರ್ಜೆ ಮಟ್ಟಕ್ಕೆ ಕೊಂಡೊಯ್ಯುವುದು ತಮ್ಮ ಕನಸಾಗಿದೆ. ರಾಜ್ಯ ಮತ್ತು ದೇಶದಲ್ಲಿ ತುಮಕೂರು ನಗರ ಕ್ರೀಡಾನಗರಿಯಾಗಿ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಕ್ರೀಡೆಗೆ ಅಗತ್ಯವಾಗಿ ಬೇಕಾಗಿರುವ ಕ್ರೀಡಾಂಗಣ ಸೇರಿದಂತೆ ಎಲ್ಲಾ ಮೂಲ ಸೌಕರ‍್ಯಗಳನ್ನು ಒದಗಿಸುವ ಕೆಲಸ ಮಾಡಲಾಗಿದೆ. ರಾಜಕಾರಣವೂ ಒಂದು ರೀತಿಯ ಕ್ರೀಡೆ ಇದ್ದಂತೆ. ರಾಜಕಾರಣದಲ್ಲಿ ದೈಹಿಕವಾಗಿ ಕ್ರೀಡೆ ಆಡದಿದ್ದರೂ ಮಾನಸಿಕವಾಗಿ ಸದಾ ಕ್ರೀಡಾ ಚಟುವಟಿಕೆಯಿಂದ ಕೂಡಿರಬೇಕು ಎಂದು ಅವರು ತಿಳಿಸಿದರು.ಕನ್ನಿಕಾ ಪರಮೇಶ್ವರ್ ಮಾತನಾಡಿ, ಟೆನ್ನಿಸ್ ಕ್ರೀಡೆ ಅಷ್ಟು ಸುಲಭವದ ಆಟವಲ್ಲ. ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವವರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರುವ ಜತೆಗೆ ಏಕಾಗ್ರತೆ ಬಹು ಮುಖ್ಯವಾಗಿದೆ ಎಂದರು.
ಈ ವೇಳೆ ಶಾಸಕರಾದ ಗೋವಿಂದರಾಜು, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಕಪೂರ್, ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಸುಶಾನ್ ಕಪೂರ್, ಸುಪ್ರೀತ್, ಅಮರನಾಥ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿ.ಪಂ. ಸಿಇಒ ಬಿ.ವಿ. ಅಶ್ವಿಜ, ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ. ದ್ಯಾಬೇರಿ ಮತ್ತಿತರರು ಉಪಸ್ಥಿತರಿದ್ದರು.