ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ಮುನ್ನ ಸ್ಟ್ರಾಂಗ್ ರೂಂ ಬಾಗಿಲು ತೆರೆಯುವಲ್ಲಿ ಆಗಿರುವ ಲೋಪದೋಷದ ಬಗ್ಗೆ ಕೇಂದ್ರ, ರಾಜ್ಯ ಚುನಾವಣಾ ಆಯೋಗಗಳು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಅಧ್ಯಕ್ಷ, ಪರಾಜಿತ ಅಭ್ಯರ್ಥಿ ಕೆ.ಎಸ್. ಶಿವಕುಮಾರಪ್ಪ ಒತ್ತಾಯಿಸಿದ್ದಾರೆ.

- ಸ್ಟ್ರಾಂಗ್ ರೂಂ ಬೀಗ ತೆಗೆಯದೇ, ಚಿಲಕ ಒಡೆದ ಗಂಭೀರ ಪ್ರಮಾದಕ್ಕೆ ಆಮ್ ಆದ್ಮಿ ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ಮುನ್ನ ಸ್ಟ್ರಾಂಗ್ ರೂಂ ಬಾಗಿಲು ತೆರೆಯುವಲ್ಲಿ ಆಗಿರುವ ಲೋಪದೋಷದ ಬಗ್ಗೆ ಕೇಂದ್ರ, ರಾಜ್ಯ ಚುನಾವಣಾ ಆಯೋಗಗಳು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಅಧ್ಯಕ್ಷ, ಪರಾಜಿತ ಅಭ್ಯರ್ಥಿ ಕೆ.ಎಸ್. ಶಿವಕುಮಾರಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆ ಕೇಂದ್ರದಲ್ಲಿ ಸಕಾಲಕ್ಕೆ ವಿದ್ಯುನ್ಮಾನ ಮತಯಂತ್ರಗಳಿದ್ದ ಸ್ಟ್ರಾಂಗ್ ರೂಂಗಳ ಬಾಗಿಲುಗಳಿಗೆ ಹಾಕಿದ್ದ ಬೀಗಗಳನ್ನು ಕೀಗಳಿಂದ ತೆಗೆದಿಲ್ಲ. ಬದಲಿಗೆ ಸುತ್ತಿಗೆಯಿಂದ ಚಿಲಕಗಳನ್ನು ಒಡೆದು, ರೂಂಗಳ ಬಾಗಿಲುಗಳನ್ನು ತೆರೆದಿರುವುದು ಮಹಾಲೋಪವಾಗಿದೆ. ಈ ವಿಚಾರವನ್ನು ಆಯೋಗಗಳು ಗಂಭೀರವಾಗಿ ಪರಿಗಣಿಸಲಿ ಎಂದರು.

ಸ್ಟ್ರಾಂಗ್ ರೂಂ ಬಾಗಿಲು ತೆರೆಯಲಾಗದ ಲೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ಸೋಮವಾರ ಸಂಜೆಯೇ ಇ-ಮೇಲ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಆದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸೋಮವಾರ ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಕೇಂದ್ರಕ್ಕೆ ನಾವು ಹೋಗಿದ್ದೆವು. 8 ಗಂಟೆಯಾದರೂ ಸ್ಟ್ರಾಂಗ್ ರೂಂ ಬಾಗಿಲು ತೆರೆದಿರಲಿಲ್ಲ. ಯಾವ ಕಾರಣಕ್ಕೆ ಸ್ಟ್ರಾಂಗ್ ರೂಂ ಬಾಗಿಲು ತೆರೆಯುತ್ತಿಲ್ಲವೆಂದು ಚುನಾವಣಾಧಿಕಾರಿಗೆ ಕೇಳಿದರೆ ಬೀಗದ ಸಂಖ್ಯೆ ವ್ಯತ್ಯಾಸವಾಗಿದೆ. ಹಾಗಾಗಿ, ಸುತ್ತಿಗೆಯಿಂದ ಚಿಲಕ ಒಡೆದು, ಬಾಗಿಲು ತೆರೆಯುವುದಾಗಿ ಹೇಳಿದರು ಎಂದು ದೂರಿದರು.

ಮತ ಎಣಿಕೆ ವೇಳೆ ಇಂತಹ ಘಟನೆ ಆಗಿದ್ದನ್ನು ಗಮನಿಸಿದರೆ ಸಂಶಯ, ಅನುಮಾನ ಬರುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ, ಗಂಭೀರ ಲೋಪಕ್ಕೆ ಯಾರು ಹೊಣೆ? ಸ್ಟ್ರಾಂಗ್ ರೂಂ ತೆರೆಯುವಲ್ಲಿ ಆದ ಲೋಪದ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಕಾನೂನಾತ್ಮಕ ಹೋರಾಟ ನಡೆಸಲಿದ್ದೇವೆ. ಜನರ ಮುಂದೆ ಈ ಎಲ್ಲ ವಿಷಯ ತಿಳಿಸಲಾಗುವುದು. ಮತ ಎಣಿಕೆ ಅಂತಿಮ ಸುತ್ತಿನ ವೇಳೆಯೂ 3 ವಿದ್ಯುನ್ಮಾನ ಮತಯಂತ್ರ ಓಪನ್ ಆಗದ ಬಗ್ಗೆಯೂ ಅನುಮಾನವಿದೆ ಎಂದರು.

ಅಲ್ಲದೇ, ಸ್ಟ್ರಾಂಗ್ ರೂಂ ತೆರೆಯಲು ವಿಳಂಬವಾದಾಗಲೇ ಫಲಿತಾಂಶವನ್ನು ಪ್ರಕಟಿಸದಂತೆ ತಡೆ ಕೋರಿ ಲಿಖಿತ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ, ಹಾಗೆ ಮಾಡಲಿಲ್ಲ. ಕಾನೂನು ರೀತಿ ಹೋರಾಟ ನಡೆಸಲಿದ್ದೇವೆ. ಸ್ಟ್ರಾಂಗ್‌ ರೂಂಗಳ ಚಿಲಕಗಳ ಸುತ್ತಿಗೆಯಿಂದ ಹೊಡೆದು ಬಾಗಿಲು ತೆಗೆದಿದ್ದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಚುನಾವಣಾಧಿಕಾರಿ ಸಂತೋಷಕುಮಾರ ಅವರನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡಿದರು. ಸ್ಟ್ರಾಂಗ್ ರೂಂ ಬೀಗದ ಕೀಲಿ ಕೈಗಳು ನಾಪತ್ತೆಯಾದ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದರು.

ಪಕ್ಷದ ಮುಖಂಡರಾದ ಎಸ್.ಕೆ. ಆದಿಲ್ ಖಾನ್, ಪ್ರೊ.ಧರ್ಮ ನಾಯ್ಕ, ಶಬ್ಬೀರ್ ಅಹಮದ್, ಕೆ.ಪಿ.ವಿಕಾಸ್ ಇದ್ದರು.

- - -

(ಕೋಟ್‌) ದಾವಣಗೆರೆ ದಕ್ಷಿಣ ಕ್ಷೇತ್ರದ ಮತಯಂತ್ರಗಳ ಸುರಕ್ಷತೆ ಬಗ್ಗೆಯೇ ಸಂಶಯ ವ್ಯಕ್ತವಾಗುತ್ತಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಇಷ್ಟು ದೊಡ್ಡ ಲೋಪ, ಗಂಭೀರ ಪ್ರಮಾದ ಆಗಿರುವುದಕ್ಕೆ ಕ್ಷೇತ್ರದ ಚುನಾವಣಾಧಿಕಾರಿಯೇ ನೇರ ಹೊಣೆ ಹೊರಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗಬೇಕು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಈಗಾಗಲೇ ದೂರು ಸಲ್ಲಿಸಲಾಗಿದೆ. ಮುಂದೆ ಕಾನೂನು ಹೋರಾಟಕ್ಕೂ ಚಿಂತನೆ ನಡೆಸಿದ್ದೇವೆ.

- ಕೆ.ಎಸ್.ಶಿವಕುಮಾರಪ್ಪ, ಜಿಲ್ಲಾಧ್ಯಕ್ಷ, ಆಮ್ ಆದ್ಮಿ ಪಕ್ಷ, ದಕ್ಷಿಣ ಕ್ಷೇತ್ರ ಪರಾಜಿತ ಅಭ್ಯರ್ಥಿ.

- - -

-5ಕೆಡಿವಿಜಿ2:

ದಾವಣಗೆರೆಯಲ್ಲಿ ಮಂಗಳವಾರ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ, ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೆ.ಎಸ್.ಶಿವಕುಮಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.