ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಭರಮಸಾಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನು ಶಾಸಕ ಡಾ.ಎಂ.ಚಂದ್ರಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ರಾಜಕೀಯ ನೇತಾರ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ಯಡಿಯೂರಪ್ಪನವರ ಜೊತೆಗೆ ನನಗೆ ನಿಕಟ ಬಾಂಧವ್ಯ ಇದೆ. ಅವರ ದೀರ್ಘಕಾಲದ ಅನುಯಾಯಿ ನಾನು. ಅವರು ಅನಿವಾರ್ಯವಾಗಿ ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟುವ ಆರು ತಿಂಗಳ ಮೊದಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಅವರನ್ನು ಹಿಂಬಾಲಿಸಿದ್ದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಚಿತ್ರದುರ್ಗದಲ್ಲಿ ಮೇ 9ರಂದು ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಭರಮಸಾಗರ ಬಿಜೆಪಿ ಮಂಡಲ ವತಿಯಿಂದ ನಡೆದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಾನು ಕೇಳಿದಷ್ಟು ಅನುದಾನ ಮಂಜೂರು ಮಾಡಿದ ಪರಿಣಾಮ ಎಲ್ಲಾ ಕೆರೆಗಳಲ್ಲಿ ನೀರು ತುಂಬಿದೆ. ಪರಿಣಾಮವಾಗಿ ಭರಮಸಾಗರದ ಸುತ್ತ ಸಮೃದ್ಧಿಯ ಅಡಕೆ ತೋಟಗಳು ತಲೆ ಎತ್ತಿ ನಿಂತಿವೆ. ಬರ ಆವರಿಸಿ 20 ವರ್ಷಗಳ ಕಾಲ ಸಾಕಿದ ಅಡಕೆ ತೋಟಗಳು ಒಣಗಿದರೆ ರೈತರಿಗೆ ತೊಂದರೆಯಾಗುವ ಸಂಕಟ ಇರುವುದರಿಂದ ಇಂತಹ ಯೋಜನೆಗಳನ್ನು ತರಲಾಗಿದೆ. ಜನರಿಗೆ ಉಪಕಾರ ಮಾಡಿದವರನ್ನು ಸ್ಮರಿಸುವ ಗುಣ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇರಬೇಕು. ಅದಕ್ಕಾಗಿ ಮೇ 9ರಂದು ನಡೆಯುವ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಎಂದು ಕ್ಷೇತ್ರದ ಜನತೆಯಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.

50 ವರ್ಷಗಳಲ್ಲಿ 45 ವರ್ಷಗಳ ಕಾಲ ಹೋರಾಟಕ್ಕಾಗಿಯೇ ಜೀವನ ಮುಡುಪಾಗಿಟ್ಟಿದ್ದ ಬಿ.ಎಸ್.ಯಡಿಯೂರಪ್ಪನವರು ಐದು ವರ್ಷಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಅವರು ಯಾವುದೇ ಒಂದು ಕೋಮಿಗೆ ಸೀಮಿತವಾಗದೇ ಎಲ್ಲರಿಗೂ ಅನುಕೂಲಗಳನ್ನು ಕಲ್ಪಿಸಿದರು. ಸಾಮಾಜಿಕ ನ್ಯಾಯವನ್ನು ಎಲ್ಲ ಜಾತಿ ಮತ್ತು ಧರ್ಮದವರಿಗೂ ಕಲ್ಪಿಸಿದರು. ಹಾಗಾಗಿ ಅವರಿಗೆ ಬೆಂಬಲ ತೋರಿಸಿ ಋಣ ತೀರಿಸಬೇಕಾಗಿದೆ. ಆತ್ಮ ಸಂತೋಷದಿಂದ ಅಭಿಮಾನೋತ್ಸವದಲ್ಲಿ ಭಾಗವಹಿಸಿ ಎಂದು ಜನತೆಯಲ್ಲಿ ವಿನಂತಿಸಿದರು.

ಈ ವೇಳೆ ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಉಪಾಧ್ಯಕ್ಷ ಶೈಲೇಶ್‍ಕುಮಾರ್, ಮಂಜುನಾಥ, ಪ್ರವೀಣ್‍ಕುಮಾರ್, ಚಿಕ್ಕಬೆನ್ನೂರು ಗೌಡ್ರ ತೀರ್ಥಪ್ಪ, ಕಲ್ಲೇಶ್, ಸಿದ್ದಬಸಣ್ಣ, ಕೆ.ಎನ್.‌ಮೋಹನ್, ರಾಜಣ್ಣ, ಪೆಟ್ರೋಲ್‌ ಬಸವರಾಜ್‌ ಹಾಗೂ ಭರಮಸಾಗರ ಮಂಡಲದ ಚುನಾಯಿತ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.