ಜನನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನದ ಸಾರ್ಥಕ 50 ವರ್ಷಗಳ ಅಭಿನಂದನೋತ್ಸವವನ್ನು ಮೇ 9ರಂದು ಚಿತ್ರದುರ್ಗದಲ್ಲಿ ಭವ್ಯ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಬಿಜೆಪಿ ನಾಯಕ, ಮಾಜಿ ಸಂಸದ ಪ್ರಭಾಕರ ಕೋರೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜನನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನದ ಸಾರ್ಥಕ 50 ವರ್ಷಗಳ ಅಭಿನಂದನೋತ್ಸವವನ್ನು ಮೇ 9ರಂದು ಚಿತ್ರದುರ್ಗದಲ್ಲಿ ಭವ್ಯ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಬಿಜೆಪಿ ನಾಯಕ, ಮಾಜಿ ಸಂಸದ ಪ್ರಭಾಕರ ಕೋರೆ ಹೇಳಿದರು.ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹಾಸಭೆಯಲ್ಲಿ ಸುಮಾರು 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಬೆಳಗಾವಿ ಜಿಲ್ಲೆಯಿಂದ ಮಾತ್ರವೇ ಸುಮಾರು 20 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಯಡಿಯೂರಪ್ಪ ಅವರು ದಕ್ಷಿಣ ಭಾರತದಲ್ಲಿ ಬಿಜೆಪಿ ಬಲವರ್ಧನೆಗೆ ಮಹತ್ತರ ಕೊಡುಗೆ ನೀಡಿದ ನಾಯಕರು. ಅವರ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಸ್ಥಾಪನೆಯಾಗಿದ್ದು, ರೈತಪರ ನೀತಿಗಳ ಮೂಲಕ ಜನಮನ ಗೆದ್ದಿದ್ದಾರೆ. ರಾಜ್ಯದ ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ 2006ರಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸುವರ್ಣಸೌಧ ನಿರ್ಮಾಣಕ್ಕೂ ಅವರೇ ಕಾರಣಕರ್ತರು ಎಂದು ಕೋರೆ ತಿಳಿಸಿದರು.ವಿಶೇಷವಾಗಿ ಕಾಯಕ ಮತ್ತು ದಾಸೋಹ ತತ್ವದ ಮಠಗಳಿಗೆ ಅನುದಾನ ನೀಡಿ ಅವುಗಳನ್ನು ಮುಖ್ಯವಾಹಿನಿಗೆ ತರಲು ಯಡಿಯೂರಪ್ಪ ಅವರು ಕ್ರಮಗಳನ್ನು ಕೈಗೊಂಡಿದ್ದಾರೆ. 2019ರಲ್ಲಿ ಕೃಷ್ಣಾ ನದಿ ಪ್ರವಾಹದ ಸಂದರ್ಭದಲ್ಲಿಯೂ ಸಂಕಷ್ಟದಲ್ಲಿದ್ದ ಜನರಿಗೆ ಸರ್ಕಾರದ ಮಾನದಂಡಕ್ಕಿಂತ ಹೆಚ್ಚಿನ ಪರಿಹಾರ ಘೋಷಿಸಿ, ಮನೆ ಕಳೆದುಕೊಂಡವರಿಗೆ ಹೆಚ್ಚಿನ ನೆರವು ಒದಗಿಸಿ ಸಾವಿರಾರು ಮನೆಗಳ ನಿರ್ಮಾಣಕ್ಕೆ ಕಾರಣರಾದರು ಎಂದು ಹೇಳಿದರು.ಈ ಅಭಿನಂದನೋತ್ಸವದಲ್ಲಿ ರಾಜ್ಯದ ವಿವಿಧ ಮಠಾಧೀಶರು, ಪಂಚಪೀಠಾಧೀಶರು ಸೇರಿದಂತೆ ಸುಮಾರು 1,000 ಮಠಾಧೀಶರು ಭಾಗವಹಿಸಿ ಯಡಿಯೂರಪ್ಪ ಅವರಿಗೆ ಆಶೀರ್ವಾದ ಮಾಡಲಿದ್ದಾರೆ. ಕಾರ್ಯಕ್ರಮವು ಮುಂದಿನ ಪೀಳಿಗೆಗೆ ಆದರ್ಶ ನಾಯಕತ್ವದ ಸಂದೇಶ ನೀಡುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೂ, ಯಡಿಯೂರಪ್ಪ ಅಭಿನಂದನೋತ್ಸವಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಇದೆ ವೇಳೆ ಅವರು ಸ್ಪಷ್ಟಪಡಿಸಿದ ಅವರು, ಸ್ವಾಗತ ಸಮಿತಿಯಲ್ಲಿ ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ್ ಪೂಜಾರಿ, ಶ್ರೀರಾಮುಲು, ಬಿ.ವೈ. ರಾಘವೇಂದ್ರ ಸೇರಿದಂತೆ ಹಲವಾರು ನಾಯಕರು ವಿವಿಧ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಮಹಾಂತೇಶ ಕವಟಗಿಮಠ, ಎಂ.ಬಿ.ಜಿರಲಿ, ಅನಿಲ ಬೆನಕೆ, ಮುರಘೇಂದ್ರಗೌಡ ಪಾಟೀಲ, ರಮೇಶ ದೇಶಪಾಂಡೆ, ಸಂಜಯ ಪಾಟೀಲ, ಗೀತಾ ಸುತಾರ,ಸಭಾಷ ಪಾಟೀಲ, ಡಾ.ರವಿ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನ್ನವರ ಮೊದಲಾದವರು ಉಪಸ್ಥಿತರಿದ್ದರು.